ನವದೆಹಲಿ: ಸ್ವಯಂಚಾಲಿತ ರೈಲು ಸುರಕ್ಷತಾ ವ್ಯವಸ್ಥೆಯಾಗಿರುವ (ಎಟಿಪಿ) ಸುಧಾರಿತ ಆವೃತ್ತಿ 'ಕವಚ್ 4.0'ರ ಕಾರ್ಯಶೈಲಿಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇಲ್ಲಿ ಪರಿಶೀಲಿಸಿದರು.
ರೈಲು ಭವನದಲ್ಲಿ ಜೂನ್ 22ರಂದು ಪರಿಶೀಲನೆ ಸಭೆ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಕವಚ್ 3.2 ಆವೃತ್ತಿಯನ್ನು ಹೆಚ್ಚು ಕಾರ್ಯದೊತ್ತಡ ಇರುವ ರೈಲು ಮಾರ್ಗಗಳಲ್ಲಿ ಅಳವಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೀನ ಮತ್ತು ಸುಧಾರಿತ ಆವೃತ್ತಿಯಾದ ಕವಚ್ 4.0 ಅನ್ನು ಹೊಸ ಮಾರ್ಗಗಳಲ್ಲಿ ಅಳವಡಿಸಲಿದ್ದು, ಅಲ್ಪಾವಧಿಯಲ್ಲಿ ಹೆಚ್ಚಿನ ರೈಲ್ವೆ ಜಾಲವನ್ನು ಸುರಕ್ಷತಾ ವ್ಯಾಪ್ತಿಗೆ ತರಬಹುದಾಗಿದೆ ಎಂದು ಹೇಳಿದ್ದಾರೆ.
ಕವಚ್ ವ್ಯವಸ್ಥೆ ಅಭಿವೃದ್ಧಿಪಡಿಸಿರುವ ಸಂಸ್ಥೆಯವರು ಹೊಸ ಆವೃತ್ತಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಸಚಿವರಿಗೆ ಪ್ರಗತಿ ಪರಿಶೀಲನೆ ವರದಿ ಸಲ್ಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಭಾರತೀಯ ರೈಲ್ವೆಯು ಕವಚ್ ಮೊದಲ ಆವೃತ್ತಿಯಾದ 'ರೈಲು ಅಪಘಾತ ತಡೆ ವ್ಯವಸ್ಥೆ'ಗೆ 2016ರಲ್ಲಿ ಅನುಮೋದನೆ ನೀಡಿತ್ತು. 2019ರಲ್ಲಿ ವಿಸ್ತೃತ ಪರೀಕ್ಷೆಗಳನ್ನು ನಡೆಸಿದ ಬಳಿಕ ಸುರಕ್ಷತಾ ವ್ಯವಸ್ಥೆಗೆ 'ಎಸ್‌ಐಎಲ್4' (ಉನ್ನತ ಸುರಕ್ಷತಾ ಪ್ರಮಾಣಪತ್ರ) ಲಭಿಸಿತ್ತು. ಕೋವಿಡ್ ಕಾಲಘಟ್ಟದ ನಡುವೆಯೂ ರಾಷ್ಟ್ರೀಯ ಎಟಿಪಿ ವ್ಯವಸ್ಥೆಗೆ 2020ರಲ್ಲಿ ಇಲಾಖೆಯು ಅನುಮೋದನೆ ನೀಡಿತ್ತು.
ಕವಚ್ 3.2 ಆವೃತ್ತಿಗೆ 2022ರ ಕಡೇ ತ್ರೈಮಾಸಿಕದಲ್ಲಿ ಅನುಮೋದನೆ ನೀಡಿದ್ದು, ಅಧಿಕ ಪ್ರಯಾಣದಟ್ಟಣೆಯ ದೆಹಲಿ-ಮುಂಬೈ, ದೆಹಲಿ-ಹೌರಾ ಮಾರ್ಗಗಳಲ್ಲಿ ಅಳವಡಿಸಲಾಯಿತು.
ಇದರ ಹೊರತಾಗಿ ಕವಚ್‌ನ ಉಪ ವ್ಯವಸ್ಥೆಯನ್ನು ಪ್ರತಿ ರೈಲು ಮತ್ತು ಲೊಕೊಮೊಟಿವ್‌ಗಳಲ್ಲಿ ಅಳವಡಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.