ವಾಷಿಂಗ್ಟನ್: ಬೆಂಗಳೂರು ಮೂಲದ ಅಮೆರಿಕದ ಪ್ರಜೆ ಸುಹಾಸ್ ಸುಬ್ರಮಣ್ಯಂ ಅವರು ವರ್ಜಿನಿಯಾದಿಂದ ಪ್ರಾಥಮಿಕ ಸುತ್ತಿನ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ. ಇವರು ಭಾರತೀಯ-ಅಮೆರಿಕ ಪ್ರಜೆ ಕ್ರಿಸ್ಟಲ್ ಕೌಲ್ ಸೇರಿದಂತೆ 11 ಅಭ್ಯರ್ಥಿಗಳ ವಿರುದ್ಧ ಜಯ ಸಾಧಿಸುವ ಮೂಲಕ ನವೆಂಬರ್‌ನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಲು ಅರ್ಹತೆ ಗಿಟ್ಟಿಸಿದ್ದಾರೆ.
ವರ್ಜಿನಿಯಾ ಕ್ಷೇತ್ರದಲ್ಲಿ ಭಾರತೀಯ-ಅಮೆರಿಕ ಪ್ರಜೆಗಳೇ ಹೆಚ್ಚಾಗಿದ್ದು, ಈ ಕ್ಷೇತ್ರದಿಂದ ಸುಹಾಸ್ ಸುಬ್ರಮಣ್ಯಂ ಅವರು ಮೊದಲ ಬಾರಿಗೆ ಆಯ್ಕೆ ಬಯಸಿದ್ದಾರೆ.
2019ರಲ್ಲಿ ವರ್ಜೀನಿಯಾದ ಸಾಮಾನ್ಯ ಸಭೆಗೆ ಆಯ್ಕೆಯಾಗುವ ಮೂಲಕ ಈ ಸ್ಥಾನಕ್ಕೆ ಆಯ್ಕೆಯಾದ ಮೊದಲ ಭಾರತೀಯ ಸಂಜಾತ, ದಕ್ಷಿಣ ಏಷ್ಯಾದ ಮತ್ತು ಹಿಂದೂ ವ್ಯಕ್ತಿ ಎಂಬ ಖ್ಯಾತಿಗೆ ಭಾಜನರಾಗಿದ್ದರು.
ಸುಬ್ರಮಣ್ಯಂ ಅವರು ಹೂಸ್ಟನ್‌ನಲ್ಲಿ ಜನಿಸಿದ್ದು, ಅವರ ಪೋಷಕರು ಬೆಂಗಳೂರು ಮತ್ತು ಚೆನ್ನೈ ಮೂಲದವರಾಗಿದ್ದಾರೆ. ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತಾವಧಿಯಲ್ಲಿ ಸುಬ್ರಮಣ್ಯಂ ಅವರು ಶ್ವೇತಭವನದ ತಂತ್ರಜ್ಞಾನ ನೀತಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.