ನವದೆಹಲಿ: ಸಂಸತ್ತಿನಲ್ಲಿ ನೀಟ್ ವಿಷಯದಲ್ಲಿ ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿದ ಪರಿಣಾಮ ಕಲಾಪವನ್ನು ಜುಲೈ 1, ಸೋಮವಾರಕ್ಕೆ ಮುಂದೂಡಲಾಗಿದೆ.
ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸಿದವು.
ಆದರೆ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದಲ್ಲಿ ಈ ಕುರಿತು ಚರ್ಚಿಸಲಾಗುವುದು ಎಂದು ಸ್ಪೀಕರ್ ಓಂ ಬಿರ್ಲಾ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಗಾಂಗ್ರೆಸ್ ಸಂಸದ ಗೌರವ್ ಗೋಗೊಯಿ 'ವಿದ್ಯಾರ್ಥಿಗಳಿಗೆ ಈ ಕುರಿತು ತಿಳಿದಿಲ್ಲ, ನ್ಯಾಯಕ್ಕಾಗಿ ಬೇಡುತ್ತಿದ್ದಾರೆ' ಎಂದು ಹೇಳಿದರು.
ಕಲಾಪಕ್ಕೆ ತೊಂದರೆ ಮಾಡದಂತೆ ಓಂ ಬಿರ್ಲಾ ವಿನಂತಿಸಿದರು. ಮತ್ತೊಂದೆಡೆ ವಿರೋಧ ಪಕ್ಷಗಳ ನಾಯಕರು ಘೋಷಣೆಯನ್ನು ಕೂಗಿದರು.
'ರಸ್ತೆಯಲ್ಲಿ ನಡೆಸುವ ಪ್ರತಿಭಟನೆಗೂ ಸದನದ ಒಳಗೆ ನಡೆಸುವ ಪ್ರತಿಭಟನೆಗೂ ವ್ಯತ್ಯಾಸವಿದೆ. ಕಲಾಪ ಸುಗಮವಾಗಿ ನಡೆಯುವುದು ಬೇಡವೇ? ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ವೇಳೆ ನೀಟ್ ವಿಷಯದ ಕುರಿತು ಚರ್ಚಿಸಲು ಬಯಸುವುದಿಲ್ಲವೇ' ಎಂದು ಬಿರ್ಲಾ ಹೇಳಿದರು.