HEALTH TIPS

ಲಾಸ್‌ಏಂಜಲೀಸ್ ಫಿಲ್ಮ್ ಪೆಸ್ಟಿವಲ್‌ಗೆ ಮಾಹೆ 'ಯಕ್ಷಗಾನ' ಸಾಕ್ಷ್ಯಚಿತ್ರ

           ಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ ಅಂತರ್ ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ ಕೇಂದ್ರ (ಸೆಂಟರ್ ಫಾರ್ ಇಂಟರ್‌ಕಲ್ಚರಲ್ ಸ್ಟಡೀಸ್ ಆಯಂಡ್ ಡಯಲಾಗ್-ಸಿಐಎಸ್‌ಡಿ) ಸಿದ್ಧಪಡಿಸಿದ ಕರಾವಳಿ ಕರ್ನಾಟಕದ ಪಾರಂಪರಿಕ ಕಲೆಯಾದ 'ಯಕ್ಷಗಾನ' ಕುರಿತ ಸಾಕ್ಷ್ಯಚಿತ್ರವು ಅಮೆರಿಕದ ಲಾಸ್‌ಏಂಜಲೀಸ್‌ನ ಪ್ರತಿಷ್ಠಿತ ವರ್ಲ್ಡ್ ಕಲ್ಚರಲ್ ಪಿಲ್ಮ್ ಫೆಸ್ಟಿವಲ್-2024 ರಲ್ಲಿ ಪ್ರಶಸ್ತಿ ಪೂರ್ವ (ಸೆಮಿಫೈನಲ್) ಸ್ಪರ್ಧಾ ಹಂತಕ್ಕೆ ಆಯ್ಕೆಯಾಗಿದೆ.

             ಈ ಪ್ರತಿಷ್ಠಿತ ಚಿತ್ರೋತ್ಸವ ಜುಲೈ ತಿಂಗಳ 27 ಮತ್ತು 28ರಂದು ನಡೆಯಲಿದೆ ಎಂದು ಮಾಹೆಯ ಸಾರ್ವಜನಿಕ ಸಂಪರ್ಕ ಹಾಗೂ ಸಂವಹನ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಾಕ್ಷ್ಯಚಿತ್ರವನ್ನು ಸಿಐಎಸ್‌ಡಿಯ ತುಳುನಾಡಿನ ಸಜೀವ ಸಂಸ್ಕೃತಿಗಳು: ಭಾರತದ ಅರಿವು (ಡಿಸರ್ನಿಂಗ್ ಇಂಡಿಯ: ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು) ಯೋಜನೆಯ ಭಾಗವಾಗಿ ತಯಾರಿಸಲಾಗಿದೆ. ಈ ಚಿತ್ರೋತ್ಸವಕ್ಕೆ ಸುಮಾರು 40 ದೇಶಗಳಿಂದ ಸಾಂಸ್ಕೃತಿಕ ಮಹತ್ವ ಮತ್ತು ಅಮೂಲ್ಯ ದಾಖಲೆಗಳಾಗಿರುವ ಪ್ರವೇಶಗಳು ಬಂದಿದ್ದು, ಪ್ರಸ್ತುತ ಈ ಸಾಕ್ಷ್ಯ ಚಿತ್ರವು ಕರ್ನಾಟಕದ ಕರಾವಳಿ ಜಿಲ್ಲೆಗಳ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ ಪ್ರಾದೇಶಿಕ ಕಲೆಯಾದ ಯಕ್ಷಗಾನದ ಭವ್ಯ ಪರಂಪರೆಯನ್ನು ಎತ್ತಿತೋರಿಸುತ್ತದೆ.

                 ಮಾಹೆಯ ಐರೋಪ್ಯ ಅಧ್ಯಯನ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಐಎಸ್‌ಡಿಯ ಉಪಕ್ರಮವಾಗಿ 'ಡಿಸರ್ನಿಂಗ್ ಇಂಡಿಯ: ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು' ಯೋಜನೆ ಕ್ರಿಯಾಶೀಲವಾಗಿದೆ. ಪ್ರಶಸ್ತಿ ಪುರಸ್ಕೃತ ಈ ಸಾಕ್ಷ್ಯಚಿತ್ರವು ಸ್ಥಳೀಯ ಸಾಂಸ್ಕೃತಿಕ ಜ್ಞಾನ ಮತ್ತು ಅನನ್ಯ ಪರಂಪರೆಯನ್ನು ದಾಖಲಿಸುವ ಪ್ರಯತ್ನವಾಗಿದೆ. ಈವರೆಗೆ ವಿಶ್ವದ 11 ವಿವಿಧ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಭಾಗವಹಿಸಲು ಈ ಸಾಕ್ಷ್ಯಚಿತ್ರ ಆಯ್ಕೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

'ಯಕ್ಷಗಾನ ಸಾಕ್ಷ್ಯಚಿತ್ರವನ್ನು ಡಾ. ಪ್ರವೀಣ್ ಶೆಟ್ಟಿ ಮತ್ತು ನಿತೇಶ್ ಅಂಚನ್ ನಿರ್ದೇಶಿಸಿದ್ದಾರೆ. ಇದು ಪಾರಂಪರಿಕ ಕಲಾ ಮಾಧ್ಯಮದ ಬಹುಮುಖ ಪ್ರಸ್ತುತತೆ ಮತ್ತು ಸ್ಥಳೀಯ ಸಂಸ್ಕೃತಿಯಲ್ಲಿ ಅದರ ಪ್ರಾಮುಖ್ಯತೆ ಯನ್ನು ಎತ್ತಿಹಿಡಿಯುತ್ತದೆ. ಈ ಹಿಂದೆ ವಾರಾಣಸಿಯ ಸಾಂಸ್ಕೃತಿಕ ಪ್ರವಾಸೋದ್ಯಮದ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಈ ಚಿತ್ರವು ತೀರ್ಪು ಗಾರರ ಪ್ರಶಸ್ತಿ ಜೂರಿ ಪ್ರಶಸ್ತಿಯನ್ನು ಪಡೆದಿತ್ತು. ಹೊಸದಿಲ್ಲಿಯ ಯುಜಿಸಿಯ ಕನ್ಸೋರ್ಟಿಯಂ ಫಾರ್ ಎಜುಕೇಶನಲ್ ಕಮ್ಯುನಿಕೇಶನ್ (ಸಿಇಸಿ)ಯಲ್ಲಿ ಅತ್ಯುತ್ತಮ ಚಿತ್ರಕಥೆ ಬಹುಮಾನವನ್ನು ಇದು ಗಳಿಸಿತ್ತು.

            ಮಾಹೆಯ ಈ ಸಾಕ್ಷ್ಯಚಿತ್ರದ ಸಾಧನೆಯ ಕುರಿತಂತೆ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಹಾಗೂ ಕುಲಪತಿ ಲೆ.ಜ. (ಡಾ.) ಎಂ.ಡಿ.ವೆಂಕಟೇಶ್ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ದೊರೆತ ಮನ್ನಣೆಯು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಮಾಹೆಯ ಬದ್ಧತೆಗೆ ದೊರೆತ ಮಾನ್ಯತೆಯೆಂದು ಭಾವಿಸುತ್ತೇವೆ ಎಂದವರು ಹೇಳಿದ್ದಾರೆ.

                ಈ ಸಾಕ್ಷ್ಯಚಿತ್ರದ ಮೂಲಕ ನಮ್ಮ ಭವ್ಯ ಪರಂಪರೆಯ ಕಥನಗಳು ಇಡೀ ಜಗತ್ತಿಗೆ ತಲುಪುವಂತಾಗಿವೆ. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ತೌಳವ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ, ಬೆಳೆಸುವಲ್ಲಿ ಮಾಹೆಯು ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದವರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries