ಕೊಚ್ಚಿ: ಕೊಚ್ಚಿಯ ಗ್ರಾಮಾಂತರ ಪೊಲೀಸರು ಹಾಗೂ ವಿಶೇಷ ತಂಡ ನಡೆಸಿದ ಕರ್ಯಚರಣೆಯಲ್ಲಿ ಹೀಟರ್‍ನೊಳಗಿರಿಸಿ ಸಾಗಿಸುತ್ತಿದ್ದ ಒಂದು ಕಿಲೋ ಎಂಡಿಎಂಎ ವಶಪಡಿಸಿಕೊಂಡಿದ್ದು, ಮಹಿಳೆಯನ್ನು ಬಂಧಿಸಿದ್ದಾರೆ.
ಬೆಂಗಳೂರು ಮುನೇಶ್ವರ ನಗರ ನಿವಾಸಿ ಸರ್‍ಮೀನ್ ಅಕ್ತರ್(26)ಬಂಧಿತೆ. 'ಆಪರೇಶನ್ ಕ್ಲೀನ್'ಯೋಜನೆಯನ್ವಯ ಆಲುವಾ ರೈಲ್ವೇ ನಿಲ್ದಾಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಅವರಿಗೆ ಲಭಿಸಿದ ಮಾಹಿತಿಯನ್ವಯ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ವಶಪಡಿಸಿಕೊಂಡಿರುವ ಮಾರಕ ಎಂಡಿಎಂಎಗೆ ಮಾರುಕಟ್ಟೆಯಲ್ಲಿ 50ಲಕ್ಷ ರೂ. ಮೌಲ್ಯ ಅಂದಾಜಿಸಲಾಗಿದೆ. ಹೀಟರ್‍ನೊಳಗೆ ಪ್ರತ್ಯೇಕ ಕೋಶದಲ್ಲಿ ಎಂಡಿಎಂಎ ತುಂಬಿಸಿ ದೆಹಲಿಯಿಂದ ಕೊಚ್ಚಿಗೆ ತಂದು ಯುವಕರಿಗೆ ಪೂರೈಸುವುದು ಮಹಿಳೆ ನಿತ್ಯ ದಂಧೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಬಾರಿ ರೈಲಲ್ಲಿ ಆಗಮಿಸಿ ಮಾದಕದ್ರವ್ಯ ಪೂರೈಸಿದ ನಂತರ ಮತ್ತೆ ರೈಲಲ್ಲಿ ವಾಪಸಾಗುತ್ತಾಳೆ. ಸರ್‍ಮೀನ್ ಅಕ್ತರ್ ಮಾದಕ ದ್ರವ್ಯ ಸಾಗಾಟದ ಪ್ರಮುಖ ಕೊಂಡಿಯಾಗಿದ್ದು, ಈಕೆಯ ಹಿಂದೆ ಬೃಹತ್ ಜಾಲ ಕಾರ್ಯಾಚರಿಸುತ್ತಿರುವುದಾಗಿ ಸಂಶಯಿಸಲಾಗಿದೆ.