ತಿರುವನಂತಪುರ: ಸಮಾಜದ್ರೋಹಿಗಳೊಂದಿಗೆ ಸಂಪರ್ಕದಲ್ಲಿರುವ ಪೋಲೀಸ್ ಇಲಾಖಾ ಉದ್ಯೋಗಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ನಿಯಮ-ನಿಬಂಧನೆಗಳು ಬರಲಿವೆ ಎಂದು ರಾಜ್ಯ ಪೋಲೀಸ್ ಮುಖ್ಯಸ್ಥ ಡಾ. ಶೇಖ್ ದರ್ವೇಶ್ ಸಾಹಿಬ್ ತಿಳಿಸಿದ್ದಾರೆ.
ಪೋಲೀಸ್ ಮುಖ್ಯಕಚೇರಿಯಲ್ಲಿ ನಡೆದ ಅಪರಾಧ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಮುಂದಿನ ತಿಂಗಳು ಜಾರಿಗೆ ಬರಲಿರುವ ಹೊಸ ಕಾನೂನು ಸಂಹಿತೆಗಳ ಕುರಿತು ಜಿಲ್ಲಾ ಪೋಲೀಸ್ ಮುಖ್ಯಸ್ಥರು ಸೇರಿದಂತೆ 38,000 ಕ್ಕೂ ಹೆಚ್ಚು ಪೋಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಉಳಿದವರಿಗೆ ಶೀಘ್ರದಲ್ಲೇ ತರಬೇತಿ ನೀಡಲಾಗುವುದು ಎಂದು ಶೇಖ್ ದರ್ವೇಶ್ ಸಾಹಿಬ್ ತಿಳಿಸಿದರು. ಆನ್‍ಲೈನ್ ವಂಚನೆಗಳು ಹೆಚ್ಚಾಗದಂತೆ ತಡೆಯಲು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ವ್ಯಾಪಕ ಪ್ರಚಾರ ನಡೆಸಬೇಕು. ಈ ನಿಟ್ಟಿನಲ್ಲಿ ಜನಮೈತ್ರಿ ಪೋಲೀಸರ ಸೇವೆಯನ್ನು ಬಳಸಿಕೊಳ್ಳಬೇಕು. ಪೋಲೀಸ್ ಅಧಿಕಾರಿಗಳ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ವಿಶೇಷ ಕಾಳಜಿ ವಹಿಸಲಾಗುವುದು ಎಂದರು.
ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ನಿಲ್ಲಬೇಕು. ಇಂತಹ ಪ್ರಕರಣಗಳ ಆರೋಪಿಗಳನ್ನು ಬಂಧಿಸಲು ಜಿಲ್ಲಾ ಪೋಲೀಸ್ ವರಿಷ್ಠರು ಕಠಿಣ ಕ್ರಮ ಕೈಗೊಳ್ಳಬೇಕು. ಮಕ್ಕಳು ಮತ್ತು ಮಹಿಳೆಯರು ಕಾಣೆಯಾದ ಪ್ರಕರಣಗಳ ತನಿಖೆಯನ್ನು ತೀವ್ರಗೊಳಿಸಬೇಕು. ಕಳ್ಳತನ ಮತ್ತು ವ್ಯಕ್ತಿಗಳ ಮೇಲಿನ ದೌರ್ಜನ್ಯ ತಡೆಯಬೇಕು. ಇಂತಹ ಪ್ರಕರಣಗಳಲ್ಲಿ ಅಪರಾಧಿಗಳನ್ನು ಬಂಧಿಸುವಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಪೆÇಲೀಸ್ ಮುಖ್ಯಸ್ಥರು ಸೂಚಿಸಿದರು.
ಸಭೆಯಲ್ಲಿ ಪೋಕ್ಸೋ ಪ್ರಕರಣಗಳ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಲಾಯಿತು. ಕ್ಯಾಪನ್ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‍ಗಳಡಿ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು. ಲೋಕಸಭೆ ಚುನಾವಣೆ ಶಾಂತಿಯುತವಾಗಿ ನಡೆಯಲು ಸಹಕರಿಸಿದ ವಿವಿಧ ಹಂತದ ಪೋಲೀಸ್ ಅಧಿಕಾರಿಗಳನ್ನು ಪೋಲೀಸ್ ಮುಖ್ಯಸ್ಥರು ಶ್ಲಾಘಿಸಿದರು. ಎಡಿಜಿಪಿಗಳಾದ ಮನೋಜ್ ಅಬ್ರಹಾಂ, ಎಂ.ಆರ್. ಅಜಿತ್ ಕುಮಾರ್, ಎಚ್. ವೆಂಕಟೇಶ್, ಐಜಿಗಳು, ಡಿಐಜಿಗಳು, ಎಸ್ಪಿಗಳು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು, ಎಐಜಿಗಳು ಸಭೆಯಲ್ಲಿ ಭಾಗವಹಿಸಿದ್ದರು.