ಸೋಲ್: 'ಅಮೆರಿಕದ ನೇತೃತ್ವದಲ್ಲಿ ವಿವಿಧ ರಾಷ್ಟ್ರಗಳು ವಿಧಿಸಿರುವ ನಿರ್ಬಂಧವನ್ನು ರಷ್ಯಾ ಮತ್ತು ಉತ್ತರ ಕೊರಿಯಾ ಪರಸ್ಪರ ಸಹಕಾರದಿಂದ ಎದುರಿಸಬಹುದಾಗಿದೆ' ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಉತ್ತರ ಕೊರಿಯಾ ನಾಯಕ ಕಿಮ್ ಜೊಂಗ್ ಉನ್ ಜೊತೆಗಿನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪಿಯೊಂಗ್ಯಾಂಗ್‌ಗೆ ತೆರಳುವ ಪೂರ್ವದಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
'ಉಕ್ರೇನ್ ವಿಷಯದಲ್ಲಿ ನಾನು ಕೈಗೊಂಡಿರುವ ಕ್ರಮವನ್ನು ಬೆಂಬಲಿಸಿದ್ದಾಗಿ ಉತ್ತರ ಕೊರಿಯಾಗೆ ಕೃತಜ್ಞತೆ ಸಲ್ಲಿಸುತ್ತೇನೆ' ಎಂದೂ ಅವರು ಹೇಳಿದರು. ಪುಟಿನ್ ಅವರ ಈ ಹೇಳಿಕೆಯನ್ನು ಒಳಗೊಂಡ ಬರಹ ಸರ್ಕಾರದ ಅಧಿಕೃತ ಮಾಧ್ಯಮದಲ್ಲಿ ಪ್ರಕಟವಾಗಿದೆ.
'ರಷ್ಯಾ ಮತ್ತು ಉತ್ತರ ಕೊರಿಯಾ ತಮ್ಮದೇ ಆದ ವ್ಯಾಪಾರ ಮತ್ತು ಪಾವತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಿವೆ. ಪಶ್ಚಿಮ ರಾಷ್ಟ್ರಗಳ ನಿಯಂತ್ರಣಕ್ಕೆ ಒಳಪಡದೆ ಈ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ. ಪಶ್ಚಿಮ ರಾಷ್ಟ್ರಗಳ ನಿಯಂತ್ರಣ ಮಾದರಿಯೇ ಏಕಪಕ್ಷೀಯ ಹಾಗೂ ಅಕ್ರಮವಾದುದು. ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ರಷ್ಯಾ-ಉತ್ತರ ಕೊರಿಯಾ ಪರಸ್ಪರ ಸಹಕಾರವನ್ನು ವಿಸ್ತರಿಸಲಿವೆ' ಎಂದು ಪುಟಿನ್ ತಿಳಿಸಿದ್ದಾರೆ.
ಅಣ್ವಸ್ತ್ರ, ಕ್ಷಿಪಣಿ ಕಾರ್ಯಕ್ರಮಗಳ ಕಾರಣಕ್ಕೆ ಉತ್ತರ ಕೊರಿಯಾ ಮೇಲೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಆರ್ಥಿಕ ನಿರ್ಬಂಧವನ್ನು ಹೇರಿದೆ. ಉಕ್ರೇನ್ ಮೇಲಿನ ಅತಿಕ್ರಮಣದ ಕಾರಣದಿಂದಾಗಿ ರಷ್ಯಾ ಮೇಲೆ ಅಮೆರಿಕ ಮತ್ತಿತರ ರಾಷ್ಟ್ರಗಳು ನಿರ್ಬಂಧ ಹೇರಿವೆ.
ಉತ್ತರ ಕೊರಿಯಾಗೆ ತೆರಳುವ ಮೊದಲು ಪುಟಿನ್ ಅವರು ಮಂಗಳವಾರ ರಷ್ಯಾ ಪೂರ್ವ ಭಾಗದ ನಗರ ಯಾಕುತ್ಸ್ಕ್‌ಗೆ ಭಟಿ ನೀಡಿದ್ದರು. ಇಲ್ಲಿ ತಂತ್ರಜ್ಞಾನ, ರಕ್ಷಣಾ ಸಂಬಂಧಿತ ವಿವಿಧ ಯೋಜನೆಗಳನ್ನು ಪರಿಶೀಲಿಸಿ ಸ್ಥಳೀಯ ಗವರ್ನರ್ ಅವರಿಂದ ಮಾಹಿತಿ ಪಡೆದರು.
ಉತ್ತರ ಕೊರಿಯಾದ ನಾಯಕ ಕಿಮ್ 2019ರಲ್ಲಿ ರಷ್ಯಾಗೆ ಭೇಟಿ ನೀಡಿದ್ದರು. ಆ ಬಳಿಕ ಉಭಯ ದೇಶಗಳ ನಡುವೆ ಆರ್ಥಿಕ, ಭದ್ರತಾ ವಲಯ ಹಾಗೂ ಇತರೆ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಚಟುವಟಿಕೆಗಳು ಗಣನೀಯವಾಗಿ ಏರಿಕೆಯಾಗಿವೆ.