'ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಾರ್ಕ್ ದೇಶಗಳ ಪ್ರಮುಖರನ್ನು ಆಹ್ವಾನಿಸಿರುವುದರಿಂದ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಗಣ್ಯರು ತಂಗುವ ಹೋಟೆಲಿನಿಂದ ಪ್ರಮಾಣವಚನ ಸ್ವೀಕರಿಸುವ ಸ್ಥಳಕ್ಕೆ ತೆರಳುವ ಹಾಗೂ ಮರಳುವ ಮಾರ್ಗವನ್ನು ಅವರ ಸಂಚಾರಕ್ಕಾಗಿ ಮಾತ್ರ ಮೀಸಲಿಡಲಾಗಿದೆ. ಹೀಗಾಗಿ ಹೆಚ್ಚುವ ಸಂಚಾರ ದಟ್ಟಣೆಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಗ್ಲಾದೇಶ, ಶ್ರೀಲಂಕಾ, ಮಾಲ್ದೀವ್ಸ್, ಭೂತಾನ್, ನೇಪಾಳ, ಮಾರಿಷಸ್ ಹಾಗೂ ಸೀಶೆಲ್ಸ್ ರಾಷ್ಟ್ರಗಳ ಅಗ್ರ ನಾಯಕರು ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದರೆ. ದೆಹಲಿಯ ಲೀಲಾ, ತಾಜ್, ಐಟಿಸಿ ಮೌರ್ಯ, ಕ್ಲಾರ್ಡ್ಜ್ ಹಾಗೂ ಒಬೆರಾಯ್ ಹೊಟೇಲುಗಳನ್ನು ಗಣ್ಯರಿಗಾಗಿ ಕಾಯ್ದಿರಿಸಲಾಗಿದೆ. ಹೀಗಾಗಿ ಇಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೆಹಲಿ ಪೊಲೀಸ್‌ನ ಸ್ವಾಟ್ ಹಾಗೂ ಎನ್‌ಎಸ್‌ಜಿ ಕಮಾಂಡೊಗಳು ರಾಷ್ಟ್ರಪತಿ ಭವನದ ಸುತ್ತ ಪ್ರಮುಖ ಜಾಗದಲ್ಲಿ ಇರಲಿದ್ದಾರೆ. ಈ ಕುರಿತಂತೆ ಜೂನ್ 9ರ ಕಾರ್ಯಕ್ರಮಕ್ಕಾಗಿ ದೆಹಲಿ ಪೊಲೀಸರು ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಿ, ಭದ್ರತೆಯ ಸಿದ್ಧತೆ ಕುರಿತು ಚರ್ಚಿಸಿದ್ದಾರೆ.
ಪ್ರಮಾಣವಚನ ಸ್ವೀಕಾರ ಸಮಾರಂಭ ರಾಷ್ಟ್ರಪತಿ ಭವನದ ಒಳಗೆ ನಡೆಯಲಿದೆ. ಭವನದ ಒಳಗೆ ಹಾಗೂ ಹೊರಗೆ ಮೂರು ಹಂತಗಳ ಭದ್ರತೆ ಇರಲಿದೆ. ದೆಹಲಿ ಪೊಲೀಸ್ ಸಿಬ್ಬಂದಿ ಭವನದ ಹೊರಗೆ ಇರಲಿದ್ದಾರೆ. ಅದಕ್ಕೂ ಹೊರಗೆ ಅರೆ ಸೇನಾ ಪಡೆಯ ಸಿಬ್ಬಂದಿ ಮತ್ತು ಒಳಗೆ ರಾಷ್ಟ್ರಪತಿ ಭವನದ ಆಂತರಿಕ ಭದ್ರತಾ ಸಿಬ್ಬಂದಿ ಇರಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 2,500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಗಣ್ಯರು ಸಾಗುವ ಮಾರ್ಗದಲ್ಲಿ ಸ್ನೈಪರ್ಸ್ ಹಾಗೂ ಸಶಸ್ತ್ರ ಪೊಲೀಸರು ಇರಲಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಡ್ರೋನ್ ಕಣ್ಗಾವಲು ಇರಲಿದೆ. ಒಂದು ರೀತಿಯಲ್ಲಿ ಕಳೆದ ವರ್ಷ ನಡೆದ ಜ20 ಶೃಂಗ ಸಂದರ್ಭದಲ್ಲಿ ಕೈಗೊಂಡ ಭದ್ರತೆಯೇ ಈಗಲೂ ಇರಲಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.