ನವದೆಹಲಿ: ಎಂಟನೆಯ ವೇತನ ಆಯೋಗ ರಚಿಸಬೇಕು, ವೇತನ ಪಡೆಯುವ ವರ್ಗದವರಿಗೆ ಆದಾಯ ತೆರಿಗೆ ವಿನಾಯಿತಿ ಹೆಚ್ಚು ಮಾಡಬೇಕು ಮತ್ತು ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಬೇಕು ಎನ್ನುವ ಬೇಡಿಕೆಗಳನ್ನು ಕಾರ್ಮಿಕ ಸಂಘಟನೆಗಳ ಮುಖಂಡರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮುಂದಿರಿಸಿದ್ದಾರೆ.
ನಿರ್ಮಲಾ ಅವರು ಕೇಂದ್ರ ಬಜೆಟ್‌ಗೆ ಪೂರ್ವಭಾವಿಯಾಗಿ ಕಾರ್ಮಿಕ ಸಂಘಟನೆಗಳ ಮುಖಂಡರ ಜೊತೆ ಸೋಮವಾರ ಸಭೆ ನಡೆಸಿದರು. ಕೇಂದ್ರ ಸರ್ಕಾರದ ಮಾಲೀಕತ್ವದ ಉದ್ದಿಮೆಗಳ ಖಾಸಗೀಕರಣವನ್ನು ಸ್ಥಗಿತಗೊಳಿಸಬೇಕು ಎಂದು ಮುಖಂಡರು ಸಚಿವರನ್ನು ಒತ್ತಾಯಿಸಿದರು.
ಕಾರ್ಪೊರೇಟ್ ತೆರಿಗೆ, ಸಂಪತ್ತಿನ ಮೇಲೆ ತೆರಿಗೆ ಹಾಗೂ ಪಿತ್ರಾರ್ಜಿತ ಆಸ್ತಿ ತೆರಿಗೆಯ ಮೂಲಕ ಹಣಕಾಸಿನ ಸಂಪನ್ಮೂಲ ಒಗ್ಗೂಡಿಸಲು ಮುಂದಾಗಬೇಕು ಎಂದು ಅವರು ಸಲಹೆ ನೀಡಿದ್ದಾರೆ.