ಕಾಸರಗೋಡು: ಲೋಕಸಭಾ ಕ್ಷೇತ್ರದಲ್ಲಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯ ವಿವಿಧೆಡೆ ಸ್ಥಾಪಿಸಿರುವ ಹೈಮಾಸ್ಟ್ ಬೀದಿದೀಪ ಹೆಸರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಡಿವೈಎಫ್‍ಐ ವತಿಯಿಂದ ಶುಕ್ರವಾರ ರಾಜ್‍ಮೋಹನ್ ಉಣ್ಣಿತ್ತಾನ್ ಅವರ ಕಾಞಂಗಾಡಿನ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿತು.
ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಮೆರವಣಿಗೆಯಲ್ಲಿ ಸಂಸದರ ನಿವಾಸದತ್ತ ತೆರಳುತ್ತಿದ್ದಂತೆ ಪೊಲೀಸರು ಬಾರಿಕ್ಕೇಡ್ ನಿರ್ಮಿಸಿ ಪ್ರತಿಭಟನಾಕಾರರನ್ನು ತಡೆದಿದ್ದಾರೆ. ಡಿವೈಎಫ್‍ಐ ಜಿಲ್ಲಾ ಸಮಿತಿ ಕಾರ್ಯದರ್ಶಿರಜೀಶ್ ವೆಳ್ಳೋಡ್ ಧರಣಿ ಉದ್ಘಾಟಿಸಿ ಮಾತಮಾಡಿ, ಸಂಸದರ ವಿರುದ್ಧ ಸ್ವಪಕ್ಷೀಯರೇ ಭ್ರಷ್ಟಾಚಾರದ ಆರೋಪ ನಡೆಸಿರುವುದರಿಂದ ಈ ವಿಷಯವನ್ನು ನಿರ್ಲಕ್ಷಿಸಲಾಗದು. ಜಿಲ್ಲಾದ್ಯಂತ 236 ಹೈಮಾಸ್ಟ್ ದೀಪಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ ತಲಾ ಒಂದು ಲಕ್ಷದಂತೆ 2.36ಕೊಟಿ ರೂ. ಮೊತ್ತದ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ವಿಜಿಲೆನ್ಸ್ ತನಿಖಲೆ ಅನಿವಾರ್ಯ ಎಂದು ತಿಳಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಶಾಲು ಮ್ಯಾಥ್ಯೂ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡು ಬ್ಲಾಕ್ ಕಾರ್ಯದರ್ಶಿ ಗಿನೀಶ್ ಸ್ವಾಗತಿಸಿದರು.