ಲಖನೌ: ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಆರ್‌ಎಸ್‌ಎಸ್ ಸ್ವಯಂಸೇವಕರ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿಯಾಗದೇ ನವದೆಹಲಿಗೆ ಹಿಂದಿರುಗಿದ್ದು ರಾಜಕೀಯ ವಲಯದಲ್ಲಿ ಹಲವು ರೀತಿಯ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಗೋರಖ್‌ಪುರದಲ್ಲಿ ಐದು ದಿನಗಳಿಂದ ನಡೆಯುತ್ತಿದ್ದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ಭಾಗವತ್ ಅವರು ಸೋಮವಾರ ನವದೆಹಲಿಗೆ ವಾಪಸಾದರು. ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಹೀನಾಯ ಪ್ರದರ್ಶನದ ಬಗ್ಗೆ ಚರ್ಚಿಸಲು ಇವರಿಬ್ಬರು ಭೇಟಿಯಾಗುವರು ಎಂದು ನಿರೀಕ್ಷಿಸಲಾಗಿತ್ತು. ಭಾಗವತ್- ಯೋಗಿ ಅವರ ಸಂಭವನೀಯ ಭೇಟಿ ಬಗ್ಗೆ ಸಾಕಷ್ಟು ಊಹಾಪೋಹ ಎದ್ದಿದ್ದವು.
ಬಿಜೆಪಿಯ ಕೆಲವು ಮುಖಂಡರು ನೀಡಿದ ಹೇಳಿಕೆಗಳ ಬಗ್ಗೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆಯ ವೇಳೆ ಸಂಘದ ಸಲಹೆಯನ್ನು ನಿರ್ಲಕ್ಷ್ಯ ಮಾಡಿರುವ ಬಗ್ಗೆ ಆರ್‌ಎಸ್‌ಎಸ್ ಅಸಮಾಧಾನ ಹೊಂದಿದೆ ಎನ್ನಲಾಗಿದೆ. ಇದೀಗ, ಯೋಗಿ-ಭಾಗವತ್ ಭೇಟಿ ನಡೆಯದೇ ಇರುವುದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಗೋರಖ್‌ಪುರದ ಮಾನೀರಾಮ್‌ನಲ್ಲಿ ನಡೆದ ಸಂಘದ ಸ್ವಯಂಸೇವಕರ ಶಿಬಿರಕ್ಕೆ ಚಾಲನೆ ನೀಡಲು ಭಾಗವತ್ ಬಂದ ಸಂದರ್ಭದಲ್ಲಿ, ಆದಿತ್ಯನಾಥ ಅವರು ವಾರಾಣಸಿಯಲ್ಲಿದ್ದರು. ಆದರೆ ಶುಕ್ರವಾರ ರಾತ್ರಿಯೇ ಅವರು ಗೋರಖ್‌ಪುರಕ್ಕೆ ವಾಪಸಾಗಿದ್ದರು.
ಮೂಲಗಳ ಪ್ರಕಾರ, ಆದಿತ್ಯನಾಥ ಅವರು ಭಾಗವತ್ ಅವರನ್ನು ಶನಿವಾರ ಭೇಟಿ ಮಾಡಲು ಎರಡು ಬಾರಿ ಸಮಯ ಕೋರಿದ್ದರಂತೆ. ಆದರೆ, ಅದಕ್ಕೆ ಭಾಗವತ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಘದ ಮುಖಂಡರೊಬ್ಬರು, ಆರ್‌ಎಸ್‌ಎಸ್ ಮುಖ್ಯಸ್ಥರ ಕಾರ್ಯಕ್ರಮಗಳು ಬಹಳ ಹಿಂದೆಯೇ ನಿಗದಿಯಾಗಿದ್ದವು. ಹೀಗಾಗಿ ಕೊನೆಯ ಗಳಿಗೆಯಲ್ಲಿ ಅದರಲ್ಲಿ ಬದಲಾವಣೆ ಮಾಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ನಿಜವಾದ 'ಸೇವಕ'ನಿಗೆ ಅಹಂಕಾರ ಇರುವುದಿಲ್ಲ ಮತ್ತು ಆತ ಜನರ ಸೇವೆಯನ್ನು ಘನತೆಯಿಂದ ಮಾಡುತ್ತಾನೆ ಎಂದು ಭಾಗವತ್ ಅವರು ಕೆಲ ದಿನಗಳ ಹಿಂದೆ ಹೇಳಿದ್ದರು. ಅದು ಬಿಜೆಪಿ ಕುರಿತು ನೀಡಿದ ಹೇಳಿಕೆ ಎಂದೇ ವಿಶ್ಲೇಷಿಸಲಾಗಿತ್ತು.
ಉತ್ತರ ಪ್ರದೇಶದಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಅಸಮಾಧಾನ ಹೊಂದಿದ್ದ ಆರ್‌ಎಸ್‌ಎಸ್, ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಬದಲಿಸುವಂತೆ ಸಲಹೆ ನೀಡಿತ್ತು. 2019ರ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 62 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿ 32 ಸ್ಥಾನಗಳನ್ನು ಮಾತ್ರ ಜಯಿಸಿತ್ತು. ಈ ಬಾರಿ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿಲ್ಲ ಎಂದು ಮೂಲಗಳು ಹೇಳಿವೆ.