ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ಅವರು ತಮ್ಮ ಮೇಲೆ ನಡೆಸಿರುವ ಹಲ್ಲೆಯ ಕುರಿತು ಚರ್ಚಿಸಲು ಸಮಯ ಕೋರಿ ರಾಜ್ಯಸಭಾ ಸಂಸದೆ ಸ್ವಾತಿ ಮಾಲಿವಾಲ್ ಅವರು 'ಇಂಡಿಯಾ' ಕೂಟದ ನಾಯಕರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.

ಇಂಡಿಯಾ ಕೂಟದ ನಾಯಕರಾದ ರಾಹುಲ್ ಗಾಂಧಿ ಹಾಗೂ ಶರದ್ ಪವಾರ್ ಅವರಿಗೆ ಪತ್ರ ಬರೆದಿರುವ ಸ್ವಾತಿ ಮಾಲಿವಾಲ್, 'ಹಲ್ಲೆಯ ಬಗ್ಗೆ ಮಾತನಾಡಿದ್ದಕ್ಕಾಗಿ ಅವಮಾನ ಅನುಭವಿಸಿದ್ದೇನೆ.
'ಕಳೆದ ಒಂದು ತಿಂಗಳಿನಿಂದ ಏಕಾಂಗಿಯಾಗಿ ನ್ಯಾಯಕ್ಕಾಗಿ ಹೋರಾಡುತ್ತಿದ್ದೇನೆ. ನೋವು ಅನುಭವಿಸಿದ್ದೇನೆ. ಈ ಸಂಬಂಧ ಚರ್ಚಿಸಲು ನಾನು ನಿಮ್ಮ ಸಮಯ ಕೋರಲು ಬಯಸುತ್ತೇನೆ' ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
'ನಾನು ಕಳೆದ 18 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಮಹಿಳಾ ಆಯೋಗದಲ್ಲಿದ್ದ 9 ವರ್ಷಗಳಲ್ಲಿ 1.7 ಲಕ್ಷ ಪ್ರಕರಣಗಳನ್ನು ಆಲಿಸಿದ್ದೇನೆ. ಯಾರಿಗೂ ಹೆದರದೆ, ಯಾರಿಗೂ ತಲೆಬಾಗದೆ ಮಹಿಳಾ ಆಯೋಗವನ್ನು ಅತ್ಯಂತ ಉನ್ನತ ಸ್ಥಾನದಲ್ಲಿ ನಿಲ್ಲಿಸಿದ್ದೇನೆ. ಆದರೆ ಅಂದು ಮುಖ್ಯಮಂತ್ರಿಗಳ ನಿವಾಸದಲ್ಲಿಯೇ ನನ್ನನ್ನು ಥಳಿಸಲಾಯಿತು. ನನ್ನ ಚಾರಿತ್ರ್ಯಕ್ಕೆ ಚ್ಯುತಿ ತಂದಿರುವುದು ತುಂಬಾ ಬೇಸರದ ಸಂಗತಿ. ಈ ವಿಷಯದ ಬಗ್ಗೆ ಚರ್ಚಿಸಲು ಸಮಯ ಕೋರಿ ನಾನು ಇಂದು ಇಂಡಿಯಾ ಮೈತ್ರಿಕೂಟದ ಪ್ರಮುಖ ನಾಯಕರಿಗೆ ಪತ್ರ ಬರೆದಿದ್ದೇನೆ' ಎಂದು ಮಾಲಿವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾಲಿವಾಲ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಶರದ್ ಪವಾರ್ ಅವರಿಗೆ ಬರೆದ ಪತ್ರಗಳನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.