ಕಾಸರಗೋಡು: ಮಲಬಾರ್ ಪ್ರದೇಶದಲ್ಲಿ ಪ್ಲಸ್‍ವನ್ ತರಗತಿಯಲ್ಲಿನ ಸೀಟುಗಳ ಕೊರತೆ ಪರಿಹರಿಸುವಂತೆ ಆಗ್ರಹಿಸಿ ಕೆ. ಎಸ್. ಯು ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ನಡೆದ ಪ್ರತಿಭಟನೆ ಪೊಲೀಸ್ ಮತ್ತು ಕಾರ್ಯಕರ್ತರ ಮಧ್ಯೆ ಭಾರಿ ನೂಕುನುಗ್ಗಲಿಗೆ ಕಾರಣವಾಯಿತು.
ಮಲಬಾರಿನಲ್ಲಿ ಪ್ಲಸ್‍ವನ್ ಸೀಟು ಸಮಸ್ಯೆ ಬಗೆಹರಿಸುವುದು, ಇ ಗ್ರ್ಯಾಂಟ್, ಎಲ್‍ಎಸ್‍ಎಸ್ ಮತ್ತು ಯುಎಸ್‍ಎಸ್ ವಿದ್ಯಾರ್ಥಿವೇತನ ವಿತರಣೆ ಸಮಸ್ಯೆಯನ್ನು ತಕ್ಷಣವೇ ಪರಿಹರಿಸುವುದು, ನೀಟ್-ನೆಟ್ ಪರೀಕ್ಷೆಯಲ್ಲಿನ ಅವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ನಡೆಸುವುದು ಮತ್ತು ನಿರ್ಲಕ್ಷ್ಯವನ್ನು ಕೊನೆಗೊಳಿಸಬೇಕು ಮುಂತಾದ ಬೇಡಿಕೆಗಳೊಂದಿಗೆ ಪ್ರತಿಭಟನೆ ನಡೆಸಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ತೋರುವ ಅವಗಣನೆ ಕೊನೆಗೊಳಿಸದಿದ್ದಲ್ಲಿ, ಮುಂದಿನ ದಿನಗಳಲ್ಲಿ ಪ್ರಬಲ ಹೋರಾಟ ನಡೆಸುವುದಾಗಿ ಕೆಎಸ್‍ಯು ನೇತಾರರು ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ನೂರಾರು ಮಂದಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ನಿರತರ ಮೇಲೆ ಪೆÇಲೀಸರು ಜಲಫಿರಂಗಿ ಪ್ರಯೋಗಿಸಿ ಚದುರಿಸಲು ಯತ್ನಿಸಿದರೂ, ಜಗ್ಗದೆ ಮುನ್ನುಗ್ಗುತ್ತಿದ್ದ ಕಾರ್ಯಕರ್ತರನ್ನು ನಂತರ ಪೊಲೀಸರು ಬಂಧಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಕೆ ಫೈಸಲ್ ಧರಣಿ ಉದ್ಘಾಟಿಸಿದರು. ಕೆಎಸ್‍ಯು ಜಿಲ್ಲಾಧ್ಯಕ್ಷ ಜಾವಾದ್ ಪುತ್ತೂರು ಅಧ್ಯಕ್ಷತೆ ವಹಿಸಿದ್ದರು. ಮನಾಫ್ ನುಳ್ಳಿಪಾಡಿ, ಡಿ. ಸಿ. ಸಿ. ಪ್ರಧಾನ ಕಾರ್ಯದರ್ಶಿ ಎಂ. ಸಿ.ಪ್ರಭಾಕರನ್ ಉಪಸ್ಥಿತರಿದ್ದರು. ಕೆ. ಎಸ್. ಯು ಜಿಲ್ಲಾ ಉಪಾಧ್ಯಕ್ಷ ವಿಷ್ಣು ಕಟ್ಟುಮಾಡಂ, ಅನುರಾಗ್, ನುಹ್ಮಾನ್ ಪಳ್ಳಂಗೋಡ್, ಅಖಿಲ್ ಜಾನ್, ವಿಷ್ಣು. ವಿ. ಎನ್, ಲಿಯಾನ್ಸ್, ಅನ್ಸಾರಿ ಕೊಟಕುಂಜೆ, ಅಜಿಲ್ ಬಿನು, ಚಂದ್ರಕಲಾ, ನಿತಿನ್ ರಾಜ್, ಜಿಷ್ಣು ನೇತ್ರತ್ವ ವಹಿಸಿದ್ದರು.