ಕೋಝಿಕ್ಕೋಡ್: ಕೈ ಬೆರಳ ಬದಲಿಗೆ ನಾಲಿಗೆಗೆ ಶಸ್ತ್ರಕ್ರಿಯೆ ಮಾಡಿದ ಘಟನೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಬಿಜಾನ್ ಜಾನ್ಸನ್ ಅವರ ಕಡೆಯಿಂದ ಲೋಪವಾಗಿದೆ ಎಂದು ವೈದ್ಯಕೀಯ ಮಂಡಳಿಯ ವರದಿ ಹೇಳಿದೆ.
ಘಟನೆ ಕುರಿತು ಮಗುವಿನ ಸಂಬಂಧಿಕರು ನೀಡಿರುವ ದೂರಿನನ್ವಯ ವೈದ್ಯಕೀಯ ಕಾಲೇಜು ಸಹಾಯಕ ಆಯುಕ್ತ ಕೆ.ಇ. ಪ್ರೇಮಚಂದ್ರನ್ ನೇತೃತ್ವದಲ್ಲಿ ಪೋಲೀಸರು ತನಿಖೆ ನಡೆಸಿದರು. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಿಂದ ತಪ್ಪಾಗಿದೆ ಎಂಬುದು ತನಿಖಾ ತಂಡದ ತೀರ್ಮಾನವಾಗಿದೆ. ವೈದ್ಯಕೀಯ ಮಂಡಳಿಯೂ ಇದನ್ನು ದೃಢಪಡಿಸುವ ವರದಿಯನ್ನು ಶನಿವಾರ ನೀಡಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ರಾಜೇಂದ್ರನ್ ತಿಳಿಸಿರುವರು. ಅವರು ಆರು ಸದಸ್ಯರ ತಜ್ಞರ ಸಮಿತಿಯ ಸಭೆಯನ್ನು ಕರೆದಿದ್ದರು. ಪೋಲೀಸ್ ಸರ್ಜನ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ನಂತರ ವರದಿಯನ್ನು ಡಿ.ಎಂ.ಒ. ಸಹಾಯಕ ಆಯುಕ್ತರಿಗೆ ನೀಡಲಾಗಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ.
ಮೇ 16ರಂದು ಬೆರಳಿಗೆ ಚಿಕಿತ್ಸೆ ಪಡೆಯಲು ಚೆರುವನೂರು ಮಧುರಬಜಾರ್‍ನ ಸ್ಥಳೀಯರ ಪುತ್ರಿಗೆ ಕೈ ಬೆರಳ ಶಸ್ತ್ರ ಚಿಕಿತ್ಸೆ ಬದಲು ನಾಲಿಗೆಗೆ ಶಸ್ತ್ರಕ್ರಿಯೆ ಮಾಡಲಾಗಿತ್ತು. ಘಟನೆ ವಿವಾದವಾಗುತ್ತಿದ್ದಂತೆ, ಆರೋಗ್ಯ ಸಚಿವರು ತುರ್ತು ವರದಿಯನ್ನು ಕೋರಿದ್ದರು ಮತ್ತು ಡಾ. ಬಿಜಾನ್ ಜಾನ್ಸನ್ ಅವರನ್ನು ಅಮಾನತುಗೊಳಿಸಲಾಗಿತ್ತು. ವೈದ್ಯಕೀಯ ಶಿಕ್ಷಣ ನಿರ್ದೇಶಕರು ನೇಮಿಸಿದ ತಜ್ಞರ ಸಮಿತಿಯು ವೈದ್ಯರಿಂದ ವೈಫಲ್ಯವಾಗಿರುವುದನ್ನು ವರದಿಯಲ್ಲಿ ದೃಢಪಡಿಸಿದೆ.