ಜಮ್ಮು: ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಅಮರನಾಥ ಗುಹೆಯ ತೀರ್ಥಯಾತ್ರೆಗೆ ಆಗಮಿಸುವ ಭಕ್ತರ ನೋಂದಣಿಯನ್ನು ಸ್ಥಳದಲ್ಲೇ ನಡೆಸುವ ಪ್ರಕ್ರಿಯೆಯನ್ನು ಆಡಳಿತವು ಗುರುವಾರ ಆರಂಭಿಸಿದೆ.
ಬಿಗಿ ಭದ್ರತಾ ವ್ಯವಸ್ಥೆಗಳ ನಡುವೆ, 1600 ಯಾತ್ರಿಕರು ತಮ್ಮ ಮುಂದಿನ ಪ್ರಯಾಣಕ್ಕಾಗಿ ಕಾಶ್ಮೀರದ ಭಗವತಿ-ನಗರ ಬೇಸ್ ಕ್ಯಾಂಪ್‌ಗೆ ಆಗಮಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಯರು ಸೇರಿದಂತೆ 800ಕ್ಕೂ ಹೆಚ್ಚು ಸಾಧುಗಳು ರಾಮಮಂದಿರ ಮತ್ತು ಗೀತಾ ಭವನಕ್ಕೆ ಆಗಮಿಸಿದ್ದಾರೆ. ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ 3,880 ಮೀಟರ್ ಎತ್ತರದ ಪವಿತ್ರ ಗುಹೆ ದೇಗುಲದಲ್ಲಿ ಸ್ವಾಭಾವಿಕವಾಗಿ ರೂಪುಗೊಂಡ ಹಿಮದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಉತ್ಸಾಹದಿಂದ ಕಾಯುತ್ತಿದ್ದಾರೆ.
52 ದಿನಗಳ ತೀರ್ಥಯಾತ್ರೆಯು ಇದೇ 29ರಂದು ಅನಂತನಾಗ್‌ನ ಸಾಂಪ್ರದಾಯಿಕ 48 ಕಿ.ಮೀ. ದೂರದ ನುನ್ವಾನ್-ಪಹಲ್ಗಾಮ್ ಮಾರ್ಗ ಮತ್ತು ಗಂದರ್‌ಬಾಲ್‌ನಲ್ಲಿ 14 ಕಿ.ಮೀ. ಅಂತರದ ಕಡಿದಾದ ಬಾಲ್ಟಾಲ್ ಮಾರ್ಗದಲ್ಲಿ ಪ್ರಾರಂಭವಾಗಲಿದೆ. ಯಾತ್ರಿಕರ ಮೊದಲ ತಂಡವು ಜಮ್ಮುವಿನ ಭಗವತಿ ನಗರದ ಬೇಸ್ ಕ್ಯಾಂಪ್ ಮತ್ತು ಕಣಿವೆಯ ರಾಮಮಂದಿರದಿಂದ ಶುಕ್ರವಾರ ಹೊರಡಲಿದೆ.
ನಗರದ ಶಾಲಿಮಾರ್ ಪ್ರದೇಶದಲ್ಲಿ ನೋಂದಣಿ ಮಾಡಿಸದ ಯಾತ್ರಾರ್ಥಿಗಳಿಗಾಗಿ ಸ್ಥಳದಲ್ಲೇ ನೋಂದಣಿ ಕೇಂದ್ರ ಸ್ಥಾಪಿಸಿದ್ದರೆ, ಪುರಾನಿ ಮಂಡಿ ಮೂಲದ ರಾಮಮಂದಿರ ಸಂಕೀರ್ಣದಲ್ಲಿ ಸಾಧುಗಳ ನೋಂದಣಿಗಾಗಿ ವಿಶೇಷ ಶಿಬಿರ ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ದೇಶದ ವಿವಿಧ ಭಾಗಗಳಿಂದ ಬರುವ ನೋಂದಾಯಿಸದ ಯಾತ್ರಾರ್ಥಿಗಳಿಗೆ ಸ್ಥಳದಲ್ಲೇ ನೋಂದಣಿ ಪ್ರಾರಂಭಿಸಲಾಗಿದೆ' ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಮತ್ತು ಮಹಾಜನ್ ಹಾಲ್ ನೋಂದಣಿ ಕೇಂದ್ರದ ಉಸ್ತುವಾರಿ ಅಧಿಕಾರಿ ಸೀಮಾ ಪರಿಹಾರ್ ಪಿಟಿಐಗೆ ತಿಳಿಸಿದರು.