ಟೊರಂಟೊ: ವಲಸೆ ನೀತಿಯಲ್ಲಿ ಇತ್ತೀಚಿಗಿನ ಬದಲಾವಣೆಯನ್ನು ವಿರೋಧಿಸಿ ಕೆನಡಾದ ಪ್ರಿನ್ಸ್ ಎಡ್ವರ್ಡ್ ದ್ವೀಪ ಪ್ರಾಂತದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಭಾರತೀಯ ವಿದ್ಯಾರ್ಥಿಗಳು ಪ್ರಾಂತೀಯ ವಲಸೆ ಕಚೇರಿಯ ನಿರ್ದೇಶಕ ಜೆಫ್ ಯಂಗ್ ಜತೆಗಿನ ಸಭೆಯ ಬಳಿಕ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ.
ಮೇ 24ರಂದು ಆರಂಭಿಸಿದ್ದ ಉಪವಾಸ ಸತ್ಯಾಗ್ರಹ 2ನೇ ವಾರಕ್ಕೆ ಕಾಲಿರಿಸಿದೆ. ತಮ್ಮ ಬೇಡಿಕೆಯನ್ನು ಪರಿಶೀಲಿಸುವುದಾಗಿ ಸರಕಾರ ಭರವಸೆ ನೀಡಿದೆ. ಸರಕಾರ ನಮ್ಮೊಂದಿಗೆ ಸಹಕರಿಸುತ್ತಿರುವುದರಿಂದ ಅಧಿಕಾರಿಗಳ ಕೋರಿಕೆಯಂತೆ ನಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುತ್ತಿದ್ದೇವೆ. ಕೆನಡಾ ಸರಕಾರಕ್ಕೆ ಎಲ್ಲಾ ಮಾಹಿತಿ ನೀಡಲಾಗಿದ್ದು ಸರಕಾರದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ನಮ್ಮ ಸಂದೇಶ ಅವರಿಗೆ ಅರ್ಥವಾಗಿರುವುದಾಗಿ ಭಾವಿಸುತ್ತೇವೆ. ಚೆಂಡು ಈಗ ಅವರ ಅಂಗಣದಲ್ಲಿದ್ದು ಶೀಘ್ರವೇ ಧನಾತ್ಮಕ ಉತ್ತರವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಭಾರತೀಯ ವಿದ್ಯಾರ್ಥಿ ರೂಪಿಂದರ್‍ಪಾಲ್ ಸಿಂಗ್ ಹೇಳಿದ್ದಾರೆ.
ಉಪವಾಸ ಸತ್ಯಾಗ್ರಹ ಆರಂಭವಾದಂದಿನಿಂದಲೂ ಜೆಫ್ ಯಂಗ್ ಪ್ರತಿಭಟನಾಕಾರರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಪ್ರಿನ್ಸ್ ಎಡ್ವರ್ಡ್ ದ್ವೀಪದ ಕಾರ್ಮಿಕ ಸಚಿವ ಜೆನ್ ರೆಡ್ಮಂಡ್ ಹೇಳಿದ್ದಾರೆ.