ಚೆನ್ನೈ: ತಿರುಪತ್ತೂರಿನ ಖಾಸಗಿ ಶಾಲೆಗೆ ಶುಕ್ರವಾರ ಚಿರತೆಯೊಂದು ನುಗ್ಗಿ ಬಂದು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯಲ್ಲಿ ಆತಂಕ ಮೂಡಿಸಿತ್ತು.
ತಿರುಪತ್ತೂರಿನ ಕಲೆಕ್ಟರೇಟ್ ಕಚೇರಿ ಬಳಿಯ ಖಾಸಗಿ ಶಾಲೆಯಲ್ಲಿ ಮಧ್ಯಾಹ್ನದ ವೇಳೆಯಲ್ಲಿ ವಿದ್ಯಾರ್ಥಿಗಳೆಲ್ಲ ತರಗತಿ ಕೊಠಡಿಯಲ್ಲಿದ್ದರು.
ಆಗಲೇ ಕೆಲವು ಯುವಕರು ತರಗತಿಗಳಿಗೆ ತೆರಳಿ ವಿದ್ಯಾರ್ಥಿಗಳನ್ನು ಹೊರಗೆ ಕರೆತಂದಿದ್ದರು. ಮಾಹಿತಿ ಪಡೆದ ಪೊಲೀಸರು, ಅರಣ್ಯ ಮತ್ತು ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಶಾಲೆಗೆ ಆಗಮಿಸಿದರು.
ಅಷ್ಟರಲ್ಲಿ ಶಾಲೆಯಿಂದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಹೊರ ಬಂದಿದ್ದು, ಎಲ್ಲರೂ ಉಸಿರು ಬಿಗಿ ಹಿಡಿದಿದ್ದರು. ಶಾಲಾ ಆವರಣವನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು.
ಬಳಿಕ ಶಾಲಾ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾ ಆಧರಿಸಿ ಚಿರತೆಯ ಚಲನವಲನವನ್ನು ಅಧಿಕಾರಿಗಳು ಪರಿಶೀಲಿಸಿದರು. ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆಹಿಡಿಯಲು ನಿರ್ಧರಿಸಿದ ಅಧಿಕಾರಿಗಳು, ಪಶುವೈದ್ಯರನ್ನು ಕರೆತಂದರು.
ಅರೆವಳಿಕೆ ಚುಚ್ಚುಮದ್ದು ನೀಡಲು ವೈದ್ಯರು ಮುಂದಾಗುತ್ತಿದ್ದಂತೆ ಚಿರತೆ ಹೊರಬಂದರೆ ಬಲೆಗೆ ಬೀಳಿಸಲು ಶಾಲೆ ಸುತ್ತ ಬಲೆಗಳನ್ನು ಹಾಕಲಾಯಿತು. ಕಡೆಗೆ ರಾತ್ರಿ ಸಮಯವಾದ್ದರಿಂದ ವಿದ್ಯುತ್ ಮಂಡಳಿ ಸಿಬ್ಬಂದಿ ಆ ಪ್ರದೇಶದಲ್ಲಿ ಪ್ರಖರ ದೀಪಗಳನ್ನು ಅಳವಡಿಸುವ ಕಾರ್ಯವನ್ನು ಕೈಗೆತ್ತಿಕೊಂಡರು. ಶನಿವಾರ ಬೆಳಗ್ಗೆಯೂ ಚಿರತೆ ಸೆರೆಹಿಡಿಯುವ ಕೆಲಸ ಮುಂದುವರೆದಿತ್ತು.