ನವದೆಹಲಿ (PTI): ನೂತನ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಲು ಕೆಲವು ದಿನಗಳಷ್ಟೇ ಬಾಕಿ ಇರುವ ಹೊತ್ತಿನಲ್ಲಿ ಹಂಗಾಮಿ ಸ್ಪೀಕರ್ ನೇಮಕ ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ ಜೋರಾಗಿದೆ.
ಬಿಜೆಪಿ ನಾಯಕ, ಏಳು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಭರ್ತೃಹರಿ ಮೆಹ್ತಾಬ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹಂಗಾಮಿ ಸ್ಪೀಕರ್ ಆಗಿ ನೇಮಿಸಿದ್ದಾರೆ.
ಲೋಕಸಭೆಯ ಹಿರಿಯ ಸದಸ್ಯರಾದ ಕೆ. ಸುರೇಶ್ (ಕಾಂಗ್ರೆಸ್), ಟಿ.ಆರ್. ಬಾಲು (ಡಿಎಂಕೆ), ರಾಧಾ ಮೋಹನ್ ಸಿಂಗ್ ಮತ್ತು ಫಗ್ಗನ್ ಸಿಂಗ್ ಕುಲಸ್ತೆ (ಬಿಜೆಪಿ), ಸುದೀಪ್ ಬಂದ್ಯೋಪಾಧ್ಯಾಯ (ಟಿಎಂಸಿ) ಅವರ ಹೆಸರನ್ನು ರಾಷ್ಟ್ರಪತಿಯವರು, ಮೆಹ್ತಾಬ್ ಅವರಿಗೆ ನೆರವಾಗುವ ಸಮಿತಿಗೆ ಸೂಚಿಸಿದ್ದಾರೆ.
ಹಂಗಾಮಿ ಸ್ಪೀಕರ್ ನೇಮಕ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರವು ನಿಯಮಗಳನ್ನು ಹಾಗೂ ಸಂಪ್ರದಾಯವನ್ನು ಉಲ್ಲಂಘಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಎಂಟು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಸುರೇಶ್ ಅವರನ್ನು ಹಂಗಾಮಿ ಸ್ಪೀಕರ್ ಹುದ್ದೆಗೆ ಪರಿಗಣಿಸಿಲ್ಲ ಎಂದು ದೂರಿದೆ. ಆದರೆ ಈ ಮಾತು 'ತಪ್ಪುದಾರಿಗೆ ಎಳೆಯುವಂಥದ್ದು' ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿರುಗೇಟು ನೀಡಿದ್ದಾರೆ.
ಹೊಸದಾಗಿ ಸಂಸದರಾಗಿ ಆಯ್ಕೆಯಾದವರಿಗೆ ಪ್ರಮಾಣ ವಚನ ಬೋಧಿಸುವ ಸಂದರ್ಭದಲ್ಲಿ ಮೆಹ್ತಾಬ್ ಅವರಿಗೆ ನೆರವಾಗುವ ಸಮಿತಿಗೆ ಬಾಲು, ಸುರೇಶ್ ಮತ್ತು ಬಂದ್ಯೋಪಾಧ್ಯಾಯ ಅವರು ಸೇರಲಿಕ್ಕಿಲ್ಲ ಎಂದು ವಿರೋಧ ಪಕ್ಷಗಳ ಮೂಲಗಳು ಶನಿವಾರ ತಿಳಿಸಿವೆ.
ಮೆಹ್ತಾಬ್ ಅವರು ಸತತವಾಗಿ ಏಳು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ, ಲೋಕಸಭೆಯಲ್ಲಿ ಅವರೇ ಅತ್ಯಂತ ಹಿರಿಯ ಸದಸ್ಯ ಎಂದು ರಿಜಿಜು ಹೇಳಿದ್ದಾರೆ. ಸುರೇಶ್ ಅವರು ಎಂಟು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರಾದರೂ, ಅವರು 1998 ಹಾಗೂ 2004ರಲ್ಲಿ ಆಯ್ಕೆಯಾಗಿರಲಿಲ್ಲ ಎಂದು ತಿಳಿಸಿದ್ದಾರೆ.
ಆದರೆ, ತಾವು ದಲಿತ ಎಂಬ ಕಾರಣಕ್ಕಾಗಿ ಹಂಗಾಮಿ ಸ್ಪೀಕರ್ ಹುದ್ದೆಗೆ ತಮ್ಮನ್ನು ಪರಿಗಣಿಸಲಿಲ್ಲ ಎಂದು ಸುರೇಶ್ ಆರೋಪಿಸಿದ್ದಾರೆ. ಇದನ್ನು ರಿಜಿಜು ಅಲ್ಲಗಳೆದಿದ್ದಾರೆ. ಅಲ್ಲದೆ, ಹಂಗಾಮಿ ಸ್ಪೀಕರ್ ವಿಚಾರವಾಗಿ ಸುಳ್ಳುಗಳನ್ನು ಹೇಳುವ ಮೂಲಕ ಕಾಂಗ್ರೆಸ್ ಪಕ್ಷವು ಬುಡಕಟ್ಟು ಸಮುದಾಯಕ್ಕೆ ಸೇರಿದ ಸಂಸದೀಯ ವ್ಯವಹಾರಗಳ ಸಚಿವರನ್ನು ಅವಮಾನಿಸಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಆರೋಪಿಸಿದ್ದಾರೆ.
'ಕಾಂಗ್ರೆಸ್ ಪಕ್ಷವು ಬುಡಕಟ್ಟು ಸಮುದಾಯದವರನ್ನು ಯಾವಾಗಲೂ ನಿಂದಿಸುವ ಕೆಲಸ ಮಾಡುತ್ತ ಬಂದಿದೆ. ಕಾಂಗ್ರೆಸ್ಸಿಗರು ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕರೆದಿದ್ದರು, ಅವರನ್ನು ನಿಂದಿಸಿದ್ದರು ಕೂಡ' ಎಂದು ಪೂನಾವಾಲಾ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಬೆದರಿಕೆಗಳು ಹಾಗೂ ಸುಳ್ಳುಗಳಿಗೆ ತಾವು ಅಂಜುವುದಿಲ್ಲ ಎಂದು ರಿಜಿಜು ಹೇಳಿದ್ದಾರೆ.
'ನಾನು ಹಿಂದೆಯೂ ಹೇಳಿದ್ದೇನೆ. ಈಗಲೂ ಹೇಳುತ್ತೇನೆ. ಪ್ರಜಾತಂತ್ರ ಮತ್ತು ಸಂವಿಧಾನದ ಉಳಿವಿಗಾಗಿನ ಸಮರವು ಇನ್ನೂ ಪೂರ್ಣಗೊಂಡಿಲ್ಲ' ಎಂದು ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಎಕ್ಸ್‌ನಲ್ಲಿ ಬರೆದಿದ್ದಾರೆ.