ನವದೆಹಲಿ: ತೀವ್ರ ಬಿಸಿಲಿನ ಪರಿಣಾಮ ಎ.ಸಿ, ಫ್ಯಾನ್ ಮತ್ತಿತರ ಹವಾನಿಯಂತ್ರಕ ಸಾಧನಗಳ ಬಳಕೆ ಹೆಚ್ಚಾಗಿದ್ದು, ಇದರಿಂದ ದೇಶದಲ್ಲಿ ಮೇ ತಿಂಗಳಿನಲ್ಲಿ ವಿದ್ಯುತ್ ಬಳಕೆಯ ಪ್ರಮಾಣವು ಶೇ 15ರಷ್ಟು ಅಧಿಕವಾಗಿದೆ.
ಒಂದೇ ದಿನ 250.07 ಗಿಗಾ ವಾಟ್ ವಿದ್ಯುತ್ ಬಳಕೆಯಾಗಿದ್ದು, ಈವರೆಗೆ ದಾಖಲಾದ ಅತ್ಯಧಿಕ ಪ್ರಮಾಣ ಇದಾಗಿದೆ.
ಜೂನ್ ತಿಂಗಳ ಮೊದಲ ದಿನವಾದ ಶನಿವಾರ 245.41 ಗಿಗಾ ವಾಟ್ ವಿದ್ಯುತ್ ಬಳಕೆಯಾಗಿದೆ. 'ಈ ದತ್ತಾಂಶಗಳನ್ನು ನೋಡಿದರೆ ಜೂನ್ ತಿಂಗಳಿನಲ್ಲೂ ವಿದ್ಯುತ್ ಬಳಕೆ ಅಧಿಕವಾಗಿರಲಿದೆ' ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಮೇ 29ರಂದು ದೆಹಲಿಯ ಮಂಗೇಶ್‌ಪುರದಲ್ಲಿ 52.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಉಷ್ಣತಾ ಮಾಪಕದಲ್ಲಿ ದೋಷವಿರುವ ಗುಮಾನಿ ಉಂಟಾಗಿದೆ. ಆದರೆ, ನಗರದಲ್ಲಿ ಇದೇ ಮೊದಲ ಬಾರಿಗೆ 8,302 ಮೆಗಾ ವಾಟ್ ವಿದ್ಯುತ್ ಬಳಕೆಯಾಗಿದೆ.
ಬಿಸಿಗಾಳಿಯ ಹೊಡೆತಕ್ಕೆ ಉತ್ತರ ಭಾರತ ತತ್ತರಿಸಿದೆ. ಈಗಾಗಲೇ ಹಲವಾರು ಜನರು ಸಾವನ್ನಪ್ಪಿದ್ದು, ಲಕ್ಷಾಂತರ ಜನರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ.
'ಕಳೆದ 120 ವರ್ಷಗಳಲ್ಲಿಯೇ ಕಂಡುಬಂದ ಕಡುಬೇಸಿಗೆ ಕಾಲ ಇದಾಗಿದ್ದು, 45-47 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ತಾಪಮಾನ ಈವರೆಗೆ ದಾಖಲಾಗಿರಲಿಲ್ಲ' ಎಂದು ಗಾಂಧಿನಗರದ ಐಐಟಿಯ ಪ್ರಾಧ್ಯಾಪಕ ವಿಮಲ್ ಮಿಶ್ರಾ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಮತ್ತು ಹರಿಯಾಣದ ರೋಹ್ತಕ್‌ನಲ್ಲಿ 48.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಈವರೆಗ ದೇಶದಲ್ಲಿ ದಾಖಲಾದ ಅತ್ಯಧಿಕ ತಾಪಮಾನ ಇದಾಗಿದೆ.
ದೆಹಲಿ ಹೈಕೋರ್ಟ್ ಕಳವಳ
ದೆಹಲಿಯಲ್ಲಿ ಇತ್ತೀಚೆಗೆ ಅತ್ಯಧಿಕ ತಾಪಮಾನ ದಾಖಲಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ದೆಹಲಿ ಹೈಕೋರ್ಟ್ 'ಇಂದಿನ ಪೀಳಿಗೆಯು ಅರಣ್ಯ ಸಂರಕ್ಷಣೆಯ ಬಗ್ಗೆ ನಿರ್ಲಕ್ಷ್ಯ ತೋರಿದರೆ ದೆಹಲಿಯು ಬಂಜರು ಭೂಮಿಯಾಗಿ ಬದಲಾಗಬಹುದು' ಎಂದು ಅಭಿಪ್ರಾಯಪಟ್ಟಿದೆ. 'ದೆಹಲಿಯ ಅರಣ್ಯ ಸಂರಕ್ಷಣೆಗಾಗಿ ರಚನೆಯಾಗಿದ್ದ ಆಂತರಿಕ ಸಮಿತಿಯ ಮುಖ್ಯಸ್ಥ ನಿವೃತ್ತ ನ್ಯಾಯಾಧೀಶ ನಜ್ಮಿ ವಜೀರಿ ಅವರಿಗೆ ಮೂಲಸೌಕರ್ಯಗಳ ಕೊರೆತೆಯಿಂದಾಗಿ ತಮ್ಮ ಕಾರ್ಯವನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರ್ಕಾರ ತಕ್ಷಣ ಅವರಿಗೆ ಅಗತ್ಯ ಇರುವ ಮೂಸೌಕರ್ಯ ಒದಗಿಸಬೇಕು' ಎಂದು ಕೋರ್ಟ್ ತಾಕೀತು ಮಾಡಿದೆ.