ಉಪ್ಪಳ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಬೇಕೂರು ಸುಭಾಷ್‍ನಗರ ನಿವಾಸಿ ಆಯಿಷಾಯೂಸುಫ್ ಎಂಬವರ ಮನೆಗೆ ನುಗ್ಗಿ ಬೆಲೆಬಾಳುವ ಐಫೋನ್ ಸೇರಿದಂತೆ ವಿವಿಧ ಸಾಮಗ್ರಿ ಕಳವುಗೈದ ಪ್ರರಣಕ್ಕೆ ಸಂಬಂಧಿಸಿ ಬಂದ್ಯೋಡು ಅಡ್ಕ ನಿವಾಸಿ, ಪ್ರಸಕ್ತ ಬಂಟ್ವಾಳ ಪರಂಗಿಪೇಟೆಯಲ್ಲಿ ವಾಸಿಸುತ್ತಿರುವ ಅಂತಾರಾಜ್ಯ ಕಳ್ಳ ಅಶ್ರಫ್‍ಆಲಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ 4ರಂದು ಕಳವು ನಡೆದಿದ್ದು, ಮನೆಯ ಕಪಾಟಿನಲ್ಲಿದ್ದ 1.20ಲಕ್ಷ ರೂ. ಮೌಲ್ಯದ ಐಫೋನ್ ಸೆರಿದಂತೆ ಬೆಲೆಬಾಳುವ ವಸ್ತು ಕಳವುಗೈದಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ 20ಕ್ಕೂ ಹೆಚ್ಚು ಕಳವು ಪ್ರಕರಣಗಳಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ಈತನ ವಿರುದ್ಧ ಬದಿಯಡ್ಕ, ಕಾಸರಗೋಡು, ಬೇಕಲ, ಮಂಜೇಶ್ವರ, ಬಂಟ್ವಾಳ, ಕೊಣಾಜೆ ಠಾಣೆಗಳಲ್ಲಿ ಕೇಸುಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈತನ ಜತೆ ಕಳವುಕೃತ್ಯದಲ್ಲಿ ಶಾಮೀಲಾಗಿದ್ದ ಮೂರು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದು, ಇವರಿಗಾಗಿ ಹುಡುಕಾಟ ನಡೆಯುತ್ತಿದೆ.