ಜಮ್ಮು: 'ಮಾತಾ ವೈಷ್ಣೋದೇವಿ ದೇಗುಲಕ್ಕೆ ಜಮ್ಮುವಿನಿಂದ ನೇರ ಹೆಲಿಕಾಪ್ಟರ್ ಕಾರ್ಯಾಚರಣೆ ಮಂಗಳವಾರದಿಂದ ಆರಂಭಗೊಂಡಿದ್ದು, ಒಂದೇ ದಿನದಲ್ಲಿ ದರ್ಶನ ಕೈಗೊಳ್ಳುವವರಿಗೆ ಇದು ನೆರವಾಗಲಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರ್ವತದ ಮೇಲಿರುವ ಪುಣ್ಯಕ್ಷೇತ್ರಕ್ಕೆ ಕಾತ್ರಾದ ಬೇಸ್ ಕ್ಯಾಂಪ್‌ನಿಂದ ಈಗಾಗಲೇ ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸುತ್ತಿತ್ತು.
'ಈ ಕಾರ್ಯಾಚರಣೆ ಜಮ್ಮು ವಿಮಾನ ನಿಲ್ದಾಣದಿಂದ ಬೆಳಿಗ್ಗೆ 11ಕ್ಕೆ ಹೊರಟು, ಹತ್ತು ನಿಮಿಷದಲ್ಲಿ ಕಾತ್ರಾ ತಲುಪಲಿದೆ. ಇದರ ಮೂಲಕ ದೇವಾಲಯ ದರ್ಶನಕ್ಕೆ ತೆರಳುವ ಭಕ್ತರಿಗೆ ಸೂಕ್ತ ಸೌಕರ್ಯ ಕಲ್ಪಿಸುವ ಹೊಣೆಗಾರಿಕೆ ಇದಾಗಿದೆ. ಸದ್ಯ ಆರಂಭಿಸಿರುವ ಹೆಲಿಕಾಪ್ಟರ್ ಸೇವೆಗಳ ಬಗ್ಗೆ ಪ್ರಯಾಣಿಕರ ಅನುಭವ ಆಧರಿಸಿ, ಇದನ್ನು ವಿಸ್ತರಿಸುವ ಕುರಿತು ಯೋಜನೆ ರೂಪಿಸಲಾಗುವುದು' ಎಂದು ಶ್ರೀಮಾತಾ ವೈಷ್ಣೋದೇವಿ ದೇವಾಲಯ ಮಂಡಳಿಯ ಸಿಇಒ ಅನ್ಶುಲ್ ಗರ್ಗ್ ತಿಳಿಸಿದ್ದಾರೆ.
ದೇವಾಲಯಕ್ಕೆ ತೆರಳಿದ ಮೊದಲ ಹೆಲಿಕಾಪ್ಟರ್ ಕಾರ್ಯಾಚರಣೆಯಲ್ಲಿ ದೇವಾಲಯ ಮಂಡಳಿಯ ಅಧ್ಯಕ್ಷರೂ ಆಗಿರುವ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಪ್ರಯಾಣಿಸಿದರು.
'₹35 ಸಾವಿರದ ಒಂದು ದಿನದ ಪ್ಯಾಕೇಜ್‌ನಲ್ಲಿ ಬೆಳಿಗ್ಗೆ ದೇವರ ದರ್ಶನಕ್ಕೆ ತೆರಳಿ, ಅದೇ ದಿನ ಸಂಜೆ ಮರಳಿ ಕರೆತರಲಾಗುವುದು. ಇದರಲ್ಲಿ ಹೆಲಿಪ್ಯಾಡ್ ಇರುವ ಪಂಚಿಯಿಂದ ಭವನದವರೆಗೆ ಬ್ಯಾಟರಿ ಕಾರಿನಲ್ಲಿ ಕರೆದುಕೊಂಡು ಹೋಗಲಾಗುವುದು. ಅಲ್ಲಿಂದ ರೋಪ್‌ವೇನದಲ್ಲಿ ದರ್ಶನಕ್ಕೆ ತೆರಳುವುದು ಮತ್ತು ದರ್ಶನದ ಟಿಕೆಟ್ ಎಲ್ಲವೂ ಒಳಗೊಂಡಿರುತ್ತದೆ' ಎಂದು ಗರ್ಗ್ ತಿಳಿಸಿದರು.
'₹60 ಸಾವಿರ ಬೆಲೆಯ ಎರಡನೇ ಪ್ಯಾಕೇಜ್‌ನಲ್ಲಿ ವಿಶೇಷ ಪೂಜೆಯಲ್ಲಿ ಭಾಗವಹಿಸುವ ಅವಕಾಶ ಹೆಚ್ಚುವರಿಯಾಗಿ ಸಿಗಲಿದೆ. ಈ ಯೋಜನೆಯು ಪ್ರತಿ ದಿನ 25 ಜನರಿಗೆ ಸಿಗಲಿದೆ. ಮುಂಗಾರಿನ ಮುಂದಿನ ಎರಡು ತಿಂಗಳು ನಮಗೆ ಕಲಿಕೆಗೆ ಅವಕಾಶ ಕಲ್ಪಿಸಲಿದೆ. ಜತೆಗೆ ಹೆಲಿಕಾಪ್ಟರ್ ಕಾರ್ಯಾಚರಣೆಯನ್ನೂ ಈ ಋತುವಿನಲ್ಲಿ ಹೆಚ್ಚು ಅರಿಯಲು ಸಾಧ್ಯವಾಗಲಿದೆ' ಎಂದು ತಿಳಿಸಿದರು.