ನವದೆಹಲಿ: ಮಾನವ ಕಳ್ಳಸಾಗಣೆ ತಡೆಗೆ ಪ್ರತಿ ರಾಜ್ಯವು ನೋಡಲ್ ಅಧಿಕಾರಿಯನ್ನು ಹೊಂದಿರಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಶಿಫಾರಸು ಮಾಡಿದೆ.
ರಾಜ್ಯ ಸರ್ಕಾರದ ಕಾರ್ಯದರ್ಶಿ ಅಥವಾ ಪೊಲೀಸ್ ಮಹಾ ನಿರ್ದೇಶಕರ ದರ್ಜೆಯವರು ನೋಡಲ್ ಅಧಿಕಾರಿಗಳಾಗಿರಬೇಕು.
ರಾಜಸ್ಥಾನದಲ್ಲಿ ಹುಡುಗಿಯರ ಮಾರಾಟಕ್ಕೆ ಸಂಬಂಧಿಸಿದಂತೆ 2022ರ ಅಕ್ಟೋಬರ್‌ನಲ್ಲಿ ಪ್ರಕಟವಾಗಿದ್ದ ಮಾಧ್ಯಮ ವರದಿಯನ್ನು ಆಧರಿಸಿ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಇಂತಹ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಆಯೋಗ ಕೆಲ ಶಿಫಾರಸುಗಳನ್ನು ಮಾಡಿದೆ.
ಈ ನೋಡಲ್ ಅಧಿಕಾರಿಗಳು ಜಿಲ್ಲಾ ಮಟ್ಟದಲ್ಲಿನ ಮಾನವ ಕಳ್ಳಸಾಗಣೆ ವಿರೋಧಿ ಘಟಕಗಳು ಮತ್ತು ರಾಜ್ಯ ಸರ್ಕಾರದ ಮೂಲಕ ಮಾನವ ಕಳ್ಳಸಾಗಣೆ ತಡೆಗೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಯೋಗ ಹೇಳಿದೆ. ಜಿಲ್ಲಾ ಮಟ್ಟದಲ್ಲಿನ ಈ ಘಟಕಗಳು ಗೆಜೆಟೆಡ್ ಅಧಿಕಾರಿ ನೇತೃತ್ವದಲ್ಲಿ ಇರಬೇಕು. ಅವರು ಡಿಎಸ್‌ಪಿಗಿಂತ ಕೆಳಗಿನ ಶ್ರೇಣಿಯವರಾಗಿರಬಾರದು ಎಂದು ಆಯೋಗ ತಿಳಿಸಿದೆ.
ಈ ಅಧಿಕಾರಿಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆಗಳ ಪ್ರತಿನಿಧಿಗಳು, ಸ್ಥಳೀಯ ಪ್ರತಿಷ್ಠಿತ ಎನ್‌ಜಿಒಗಳು, ಮಾನವ ಕಳ್ಳಸಾಗಣೆ ಕ್ಷೇತ್ರದ ತಜ್ಞರು ಮತ್ತು ಜಿಲ್ಲೆಯ ಕಾನೂನು ಸಲಹೆಗಾರರ ಜತೆ ಸಂಪರ್ಕದಲ್ಲಿರಬೇಕು. ಅವರುಗಳ ಸಹಾಯದಿಂದ ಮಾನವ ಕಳ್ಳಸಾಗಣೆ ನಡೆಯದಂತೆ ಮೇಲ್ವಿಚಾರಣೆ ಮಾಡಬೇಕು ಎಂದು ಅದು ಹೇಳಿದೆ.
ಮಾನವ ಕಳ್ಳಸಾಗಣೆ ತಪಾಸಣೆ ಮತ್ತು ಸಂತ್ರಸ್ತರ ಪುನರ್ವಸತಿ ಸೇರಿದಂತೆ ತಾನು ಮಾಡಿರುವ ವಿವಿಧ ಶಿಫಾರಸುಗಳ ಪಾಲನೆ ಕುರಿತು ಎಂಟು ವಾರಗಳಲ್ಲಿ ವರದಿ ಸಲ್ಲಿಸುವಂತೆ ಆಯೋಗವು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಿದೆ.