ಬದಿಯಡ್ಕ : ‘ನೋಡಿ ಕಲಿಯುವುದಕ್ಕಿಂತ ಓದಿ ಕಲಿಯುವುದೇ ಪ್ರಭಾವಶಾಲಿ. ಪ್ರತೀ ದಿನವೂ ಪತ್ರಿಕೆಗಳನ್ನು ಓದುವುದು. ಉತ್ತಮ ಲೇಖನಗಳನ್ನು ಸಂಗ್ರಹಿಸುವುದರಿಂದ ವಿದ್ಯಾರ್ಥಿಯ ಜ್ಞಾನ ಹೆಚ್ಚುತ್ತದೆ. ಒಂದು ಪತ್ರಿಕೆಯ ತಯಾರಿಯಲ್ಲಿ ನೂರಾರು ಮಂದಿಯ ಶ್ರಮ ಅಡಗಿದೆ. ಸುದ್ದಿಗಳ ನಿಖರತೆಯ ಬಗ್ಗೆ ವರದಿಗಾರ ಪರಿಶೀಲಿಸಿ ವರದಿಯನ್ನು ಪ್ರಕಟಿಸಬೇಕು ’ ಎಂದು ಪತ್ರಕರ್ತ ವಿರಾಜ್ ಅಡೂರು ಹೇಳಿದರು.
ಅವರು ಬದಿಯಡ್ಕದ ಪೆರಡಾಲ ನವಜೀವನ ಪ್ರೌಢಶಾಲೆಯಲ್ಲಿ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಬುಧವಾರ ವಾಚನಾ ವಾರಾಚರಣೆಯ ಅಂಗವಾಗಿ ನಡೆದ ಪತ್ರಿಕಾ ವರದಿ ರಚನಾ ಮಾಹಿತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಪತ್ರಕರ್ತನಿಗೆ ಸಾಮಾಜಿಕ ಕಾಳಜಿ, ವಾರ್ತಾಪ್ರಜ್ಞೆ, ಸತ್ಯಪ್ರತಿಪಾದನೆ, ನಿಷ್ಪಕ್ಷಪಾತ ಧೋರಣೆ, ನಿರ್ಭಯತ್ವ ಇರಬೇಕು. ವಿಶೇಷವಾದ, ಹೊಸ ವಿಚಾರಗಳನ್ನು ಸಾಮಾನ್ಯ ಜನತೆಗೆ ಇಷ್ಟವಾಗುವ ರೀತಿಯಲ್ಲಿ ನೀಡುವುದು ಪತ್ರಕರ್ತನ ಜವಾಬ್ದಾರಿ. ಪತ್ರಿಕೆಯು ಜನಮನದ ನಾಡಿಮಿಡಿತ. ಪತ್ರಿಕೆಗಳು ಓದುಗನಿಗೆ ಸಮಾಧಾನ ಆಗುವ ರೀತಿಯಲ್ಲಿ ವರದಿಯನ್ನು ನೀಡಬೇಕು ಎಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಪೆರಡಾಲ ನವಜೀವನ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಮಿನಿ ಟೀಚರ್ ವಹಿಸಿದ್ದರು. ಶಿಕ್ಷಕಿ ಪುಂಡೂರು ಪ್ರಭಾವತಿ ಕೆದಿಲಾಯ ಸ್ವಾಗತಿಸಿದರು. ಶಿಕ್ಷಕ ಶ್ರೀನಿವಾಸ ಕಿದೂರು ವಂದಿಸಿದರು. ಕಾರ್ಯಕ್ರಮದಲ್ಲಿ ನಿರಂಜನ ಮಾಸ್ತರ್, ರಾಜೇಶ್ ಅಗಲ್ಪಾಡಿ, ಕೃಷ್ಣ ಕುಮಾರ್, ಜ್ಯೋತ್ಸ್ನಾ ಟೀಚರ್, ವಿದ್ಯಾ ಟೀಚರ್, ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಶರ್ವಾಣಿ, ಜತೆ ಕಾರ್ಯದರ್ಶಿ ಚಿರಂಜೀವಿ ಮೊದಲಾದವರು ಉಪಸ್ಥಿತರಿದ್ದರು.