ಲಾಹೋರ್: 'ಸಿಖ್ ಸಾಮ್ರಾಜ್ಯದ ಮೊದಲ ದೊರೆ ಮಹಾರಾಜ ರಂಜಿತ್ ಸಿಂಗ್ ಅವರ ಪ್ರತಿಮೆಯನ್ನು ಕರ್ತಾರ್‌ಪುರ್ ಸಾಹೀಬ್‌ನಲ್ಲಿ ಮರುಸ್ಥಾಪಿಸಲು ನಿರ್ಧರಿಸಲಾಗಿದೆ' ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರ ಹೇಳಿದೆ.
ಗುರುದ್ವಾರ ದರ್ಬಾರ್ ಸಾಹೀಬ್ ಎಂದೂ ಕರೆಯಲಾಗುವ ಕರ್ತಾರ್‌ಪುರ್ ಸಾಹೀಬ್ ಲಾಹೋರ್‌ನಿಂದ ಈಶಾನ್ಯಕ್ಕೆ 150 ಕಿ.ಮೀ ದೂರದಲ್ಲಿದ್ದು, ಭಾರತದ ಗಡಿಗೆ ಸಮೀಪದಲ್ಲಿದೆ.
ಮಹಾರಾಜ ರಂಜಿತ್ ಸಿಂಗ್ ಅವರ 9 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು 2019ರಲ್ಲಿ ಲಾಹೋರ್ ಕೋಟೆಯ ಬಳಿ ಸ್ಥಾಪಿಸಲಾಗಿತ್ತು. ಆದರೆ ಬಲಪಂಥೀಯ ಇಸ್ಲಾಮಿಕ್ ರಾಜಕೀಯ ಪಕ್ಷವು ಪಾಕಿಸ್ತಾನದಲ್ಲಿ ಆಡಳಿತದಲ್ಲಿದ್ದ ಸಂದರ್ಭದಲ್ಲಿ ತೆಹರೀಕ್ ಎ ಲಬ್ಬೈಕ್ ಪಾಕಿಸ್ತಾನ್ (ಟೆಎಲ್‌ಪಿ) ಕಾರ್ಯಕರ್ತರು ಎರಡು ಬಾರಿ ಇದನ್ನು ಧ್ವಂಸ ಮಾಡಿದ್ದರು.
'ಮಹಾರಾಜ ರಂಜಿತ್ ಸಿಂಗ್ ಅವರ ಪ್ರತಿಮೆಯನ್ನು ಕರ್ತಾರ್‌ಪುರದ ಗುರುದ್ವಾರ್ ದರ್ಬಾರ್ ಸಾಹೀಬ್ ಬಳಿ ಸ್ಥಾಪಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಹಾಗೂ ಭಾರತೀಯ ಸಿಖ್ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ' ಎಂದು ಪಂಜಾಬ್‌ನ ಮೊದಲ ಸಿಖ್ ಸಚಿವ ಹಾಗೂ ಪಾಕಿಸ್ತಾನ ಸಿಖ್ ಗುರುದ್ವಾರ ಪ್ರಬಂಧಕ್ ಸಮಿತಿಯ ಅಧ್ಯಕ್ಷ ಸರ್ದಾರ್ ರಮೇಶ್ ಸಿಂಗ್ ಅರೋರಾ ಅವರು ಪಿಟಿಐಗೆ ತಿಳಿಸಿದ್ದಾರೆ.
'ಭಾರತದಿಂದ ಕರ್ತಾರ್‌ಪುರ್‌ಗೆ ಭೇಟಿ ನೀಡುವ ಸಿಖ್ಖರೂ ಈ ಪ್ರತಿಮೆಯನ್ನು ವೀಕ್ಷಿಸಲು ಅನಕೂಲವಾಗುವಂತೆ ಇದನ್ನು ಪುನರ್ ಸ್ಥಾಪಿಸಲಾಗುತ್ತಿದೆ. ಈ ಬಾರಿ ಸಾಕಷ್ಟು ಭದ್ರತೆಯನ್ನು ನೀಡುವ ಮೂಲಕ ಪ್ರತಿಮೆಯ ಸುರಕ್ಷತೆಯನ್ನು ಕಾಪಾಡಲಾಗುವುದು. ಈಗಾಗಲೇ ಪ್ರತಿಮೆಯ ಜೀರ್ಣೋದ್ಧಾರ ಕೆಲಸ ಆರಂಭಗೊಂಡಿದೆ' ಎಂದಿದ್ದಾರೆ.
ಭಾರತ ಉಪಖಂಡದ ವಾಯವ್ಯ ಭಾಗದಲ್ಲಿ 19ನೇ ಶತಮಾನದ ಆರಂಭದಲ್ಲಿ ಆಳಿದ ಮೊದಲ ಸಿಖ್ ದೊರೆ ಮಹಾರಾಜ ರಂಜಿತ್ ಸಿಂಗ್. ಈ ಸಂಸ್ಥಾನದ ಕೇಂದ್ರ ಸ್ಥಾನ ಲಾಹೋರ್‌ನಲ್ಲಿತ್ತು. ರಂಜಿತ್ ಸಿಂಗ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಆರಂಭವಾಗಿದ್ದು, ಸದ್ಯ 455 ಸಿಖ್ಖರು ಭಾರತದಿಂದ ಬಂದಿದ್ದಾರೆ. ಬುಧವಾರ ಮಹಾರಾಜ ಅವರ ಪ್ರತಿಮೆಯನ್ನು ಸ್ಥಾಪಿಸಲಾಗುವುದು' ಎಂದು ಮಾಹಿತಿ ನೀಡಿದ್ದಾರೆ.