ಮುಂಬೈ: ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಹ್ಯಾಕ್ ಮಾಡಬಹುದು. ಹೀಗಾಗಿ, ಜಗತ್ತು ಮತ್ತೆ ಮತಪತ್ರಗಳ ವ್ಯವಸ್ಥೆಗೆ ಮೊರೆ ಹೋಗಬೇಕು ಎಂದು ಟೆಸ್ಲಾ ಕಂಪನಿ ಮಾಲೀಕ ಇಲಾನ್ ಮಸ್ಕ್ ಹೇಳಿರುವುದು ಭಾನುವಾರ ವಿವಾದದ ಕಿಡಿ ಹೊತ್ತಿಸಿದೆ.
ಮಸ್ಕ್ ಹೇಳಿಕೆ ಟೀಕಿಸಿ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಇವಿಎಂಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ.
ಮಸ್ಕ್ ಹೇಳಿದ್ದೇನು?: ಕೆರೀಬಿಯನ್ ದ್ವೀಪದಲ್ಲಿ ಇತ್ತೀಚೆಗೆ ನಡೆದಿದ್ದ ಚುನಾವಣೆ ವೇಳೆ ಇವಿಎಂ ಸಂಬಂಧಿತ ಅಕ್ರಮಗಳು ನಡೆದಿವೆ ಎಂದು ಅಮೆರಿಕದ ರಾಜಕಾರಣಿ ರಾಬರ್ಟ್ ಎಫ್.ಕೆನಡಿ ಜೂನಿಯರ್ ಹೇಳಿದ್ದರು.
ಬಿಜೆಪಿ ಪ್ರತಿಕ್ರಿಯೆ: ಇವಿಎಂಗಳ ಕುರಿತು ಅಮೆರಿಕ ರಾಜಕಾರಣಿಯ ಮಾತಿಗೆ ಮಸ್ಕ್ ಅವರು ಪ್ರತಿಕ್ರಿಯಿಸಿದ್ದರೂ ಮಸ್ಕ್ ಅವರ ಮಾತಿಗೆ ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಅಲ್ಲದೇ, ವಾಯವ್ಯ ಮುಂಬೈ ಲೋಕಸಭಾ ಕ್ಷೇತ್ರದ ಮತ ಎಣಿಕೆ ವೇಳೆ ಹಲವು ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದ ಸಂದರ್ಭದಲ್ಲಿಯೇ, ಇವಿಎಂ ಸುರಕ್ಷತೆ-ಕ್ಷಮತೆ ಬಗ್ಗೆ ವಿವಾದ ಎದ್ದಿದೆ.
ಈ ಹಿಂದಿನ ಸರ್ಕಾರದಲ್ಲಿ ಎಲೆಕ್ಟ್ರಾನಿಕ್ಸ್, ಐಟಿ ಖಾತೆ ರಾಜ್ಯ ಸಚಿವರಾಗಿದ್ದ ರಾಜೀವ್ ಚಂದ್ರಶೇಖರ್, 'ಮಸ್ಕ್ ಅವರ ಅಭಿಪ್ರಾಯವು ಇವಿಎಂಗಳ ಕುರಿತು ಬಿಡುಬೀಸಾಗಿ ನೀಡಿರುವ ಸಾಮಾನ್ಯೀಕರಣಗೊಳಿಸಿದ ಹೇಳಿಕೆ ಎನಿಸುತ್ತದೆ. ಒಂದು ಅತ್ಯಂತ ಸುರಕ್ಷಿತವಾದ ಡಿಜಿಟಲ್ ಹಾರ್ಡ್‌ವೇರ್ ಅನ್ನು ಯಾರಿಂದಲೂ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದಂತಿದೆ, ಅದು ತಪ್ಪು ಅಭಿಪ್ರಾಯ' ಎಂದಿದ್ದಾರೆ.
'ಮಸ್ಕ್ ಅವರ ಅಭಿಪ್ರಾಯ ಅಮೆರಿಕ ಮತ್ತು ಇತರ ದೇಶಗಳಿಗೆ ಅನ್ವಯಿಸಬಹುದು. ಆ ದೇಶಗಳಲ್ಲಿ ಇಂಟರ್‌ನೆಟ್ ಸಂಪರ್ಕದ ಇವಿಎಂ ಅಭಿವೃದ್ಧಿಪಡಿಸುವುದಕ್ಕಾಗಿ ರೂಢಿಯಲ್ಲಿರುವ ಕಂಪ್ಯೂಟರ್ ವೇದಿಕೆಗಳನ್ನು ಬಳಸಲಾಗುತ್ತದೆ' ಎಂದು ಹೇಳಿದ್ದಾರೆ.
'ಭಾರತದಲ್ಲಿ ಬಳಸುವ ಇವಿಎಂಗಳನ್ನು ನಿರ್ದಿಷ್ಟ ಉದ್ದೇಶಕ್ಕೆ ಅಗತ್ಯವಿರುವಂತೆ ವಿನ್ಯಾಸಗೊಳಿಸಲಾಗಿದೆ. ಇವು ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ನೆಟ್‌ವರ್ಕ್ ಅಥವಾ ಮಾಧ್ಯಮದ ಸಂಪರ್ಕ ಇಲ್ಲದೆ, ಪ್ರತ್ಯೇಕವಾಗಿಯೇ ಇರುತ್ತವೆ. ಬ್ಲೂಟೂಥ್, ವೈಫೈ ಸಂಪರ್ಕವೂ ಸಾಧ್ಯವಾಗದಂತೆ ವಿನ್ಯಾಸಗೊಳಿಸಲಾಗಿದೆ' ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ರಾಜೀವ್ ಚಂದ್ರಶೇಖರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಸ್ಕ್, 'ಯಾವುದೇ ಯಂತ್ರವನ್ನಾದರೂ ಹ್ಯಾಕ್ ಮಾಡಬಹುದು' ಎಂದಿದ್ದಾರೆ.
ಈ ಮಾತಿಗೆ, 'ತಾಂತ್ರಿಕವಾಗಿ ನಿಮ್ಮ ವಾದ ಸರಿ. ಕ್ವಾಂಟಮ್ ಕಂಪ್ಯೂಟ್ ತಂತ್ರಜ್ಞಾನ ಬಳಸಿ ಎಷ್ಟೇ ಜಟಿಲವಾದ ರಹಸ್ಯವನ್ನು ನಾನು ಭೇದಿಸಬಲ್ಲೆ. ವಿಮಾನವೊಂದರ ಗಾಜಿನ ಕಾಕ್‌ಪಿಟ್‌ನಲ್ಲಿರುವ ವಿಮಾನ ನಿಯಂತ್ರಿಸುವ ಸಾಧನಗಳನ್ನು ಸೇರಿದಂತೆ ಯಾವುದೇ ಡಿಜಿಟಲ್ ಹಾರ್ಡ್‌ವೇರ್/ಸಿಸ್ಟಮ್ ಅನ್ನು ನಾನು ಹ್ಯಾಕ್ ಮಾಡಬಲ್ಲೆ' ಎಂದು ಚಂದ್ರಶೇಖರ್ ಹೇಳಿದ್ದಾರೆ.