ಸುಕ್ಮಾ: ನಕ್ಸಲರು ಮುದ್ರಣ ಮಾಡಿದ್ದ ಅಪಾರ ಪ್ರಮಾಣದ ನಕಲಿ ನೋಟುಗಳು ಹಾಗೂ ಮುದ್ರಣ ಪರಿಕರಗಳನ್ನು ಭದ್ರತಾ ಪಡೆಗಳು ಇದೇ ಮೊದಲ ಬಾರಿಗೆ ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಜಪ್ತಿ ಮಾಡಿವೆ.
ಸುಕ್ಮಾ: ನಕ್ಸಲರು ಮುದ್ರಣ ಮಾಡಿದ್ದ ಅಪಾರ ಪ್ರಮಾಣದ ನಕಲಿ ನೋಟುಗಳು ಹಾಗೂ ಮುದ್ರಣ ಪರಿಕರಗಳನ್ನು ಭದ್ರತಾ ಪಡೆಗಳು ಇದೇ ಮೊದಲ ಬಾರಿಗೆ ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಜಪ್ತಿ ಮಾಡಿವೆ.
ನಕ್ಸಲರು ಇಲ್ಲಿನ ಬಸ್ತಾರ್ ವಲಯದಲ್ಲಿ ವಾರದ ಮಾರುಕಟ್ಟೆಗಳಲ್ಲಿ ನಕಲಿ ನೋಟುಗಳನ್ನು ಬಳಸಿ ವಹಿವಾಟು ನಡೆಸುತ್ತಿದ್ದು, ಸ್ಥಳೀಯ, ಅಮಾಯಕ ಬುಡಕಟ್ಟು ಜನರನ್ನು ವಂಚಿಸುತ್ತಿದ್ದರು ಎಂದು ಭಾನುವಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಗುಡ್ಡ ಪ್ರದೇಶದ ಕೋರಾಜ್‌ಗುಡ ಗ್ರಾಮದಲ್ಲಿ ಶನಿವಾರ ಸಂಜೆ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ನೋಟು ಮುದ್ರಣ ತಾಣದ ಮೇಲೆ ದಾಳಿ ಮಾಡಿದವು ಎಂದು ಎಸ್‌ಪಿ ಕಿರಣ್ ಜಿ. ಚವಾಣ್ ತಿಳಿಸಿದ್ದಾರೆ.
ಕೇಂದ್ರ ಮೀಸಲು ಪಡೆ, ಜಿಲ್ಲಾ ಮೀಸಲು ಪಡೆ, ಬಸ್ತಾರ್ ಫೈಟರ್ಸ್, ಜಿಲ್ಲಾ ಪೊಲೀಸ್ ಪಡೆ ಸಿಬ್ಬಂದಿ ಈ ಜಂಟಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಪೊಲೀಸರು ದಾಳಿ ನಡೆಸುವ ಸುಳಿವು ತಿಳಿದ ನಕ್ಸಲರು ಸ್ಥಳದಿಂದ ಪರಾರಿಯಾಗಿದ್ದರು ಎಂದು ಹೇಳಿದ್ದಾರೆ.
₹50, 100, 200 ಮತ್ತು 500 ಮುಖಬೆಲೆಯ ನಕಲಿ ನೋಟುಗಳು, ವರ್ಣ ಮತ್ತು ಕಪ್ಪು ಬಿಳುಪು ಮುದ್ರಣಯಂತ್ರಗಳು, ಇನ್‌ವರ್ಟರ್, 200 ಬಾಟೆಲ್ ಇಂಕ್, ನಾಲ್ಕು ಕ್ಯಾಟ್ರಿಡ್ಜ್‌ಗಳು, 9 ಪ್ರಿಂಟರ್ ರೋಲ್‌ಗಳು, ವೈರ್‌ಲೆಸ್ ಸೆಟ್‌ಗಳನ್ನು ಜಪ್ತಿ ಮಾಡಲಾಗಿದೆ.
ಇದರ ಜೊತೆಗೆ, ಎರಡು ಮಜಲ್ ಲೋಡಿಂಗ್ ಗನ್‌ಗಳು, ದೊಡ್ಡ ಪ್ರಮಾಣದ ಸ್ಫೋಟಕಗಳು, ನಕ್ಸಲರ ಸಮವಸ್ತ್ರಗಳನ್ನು ಜಪ್ತಿ ಮಾಡಲಾಗಿದೆ ಎಂದು ವಿವರಿಸಿದ್ದಾರೆ. ಹಣಕಾಸಿನ ಕೊರತೆ ನೀಗಿಸಿಕೊಳ್ಳಲು ಈ ಮಾರ್ಗ ಕಂಡುಕೊಂಡಿದ್ದರು ಎನ್ನಲಾಗಿದೆ ಎಂದಿದ್ದಾರೆ.