ಕೊಚ್ಚಿ: ಕೊಚ್ಚಿಯ ವಿಜ್ಞಾನ ವಿಶ್ವವಿದ್ಯಾನಿಲಯದಲ್ಲಿ(ಕುಸ್ಯಾಟ್) ಸ್ವೀಪರ್ ಕಮ್ ಕ್ಲೀನರ್ ಹುದ್ದೆಯ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರಿನ ಮೇರೆಗೆ ಮೂರು ತಿಂಗಳೊಳಗೆ ಪ್ರಾಥಮಿಕ ತನಿಖೆ ನಡೆಸುವಂತೆ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ನಿರ್ದೇಶಕರಿಗೆ ಹೈಕೋರ್ಟ್ ಸೂಚಿಸಿದೆ.
ನೇಮಕಾತಿಗಳನ್ನು ಪ್ರಶ್ನಿಸಿ ತಿರುವನಂತಪುರA ಮೂಲದ ಬಿಂದುಲಾಲ್ ಹಾಗೂ ಇತರ ೨೦ ಮಂದಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಕೆ. ಬಾಬು ಸೂಚನೆ ನೀಡಿದರು.
೨೦೦೮ರಲ್ಲಿ ಹುದ್ದೆಗೆ ಅಧಿಸೂಚನೆ ಪ್ರಕಟವಾಗಿದ್ದು, ೨೦೧೦ರಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಅಂತಿಮ ಶ್ರೇಣಿ ಪಟ್ಟಿ ಆಧರಿಸಿ ೯೭ ಮಂದಿಯನ್ನು ನೇಮಕ ಮಾಡಲಾಗಿದೆ. ರ‍್ಯಾಂಕ್ ಪಟ್ಟಿ ಪ್ರಕಟವಾಗುವ ಒಂದು ತಿಂಗಳ ಹಿಂದೆಯೇ ನೌಕರರ ಸಂಘದ ಕೆಲ ಪದಾಧಿಕಾರಿಗಳು ಹಾಗೂ ಒಬ್ಬ ಅಭ್ಯರ್ಥಿಯ ನಡುವಿನ ಸಂವಹನದ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಗಳ ಹೆಸರು ಸೋರಿಕೆಯಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ತನಿಖೆ ನಡೆಸುವಂತೆ ವಿಜಿಲೆನ್ಸ್ ನಿರ್ದೇಶಕರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ ೧೭ಎ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿಲ್ಲದ ಕಾರಣ ವಿಜಿಲೆನ್ಸ್ ಇಲಾಖೆಯು ದೂರನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಹಿರಿಯ ಸರ್ಕಾರಿ ಅರ್ಜಿದಾರರು ಮನವಿಯನ್ನು ವಿರೋಧಿಸಿದರು. ಆದರೆ ಆಪಾದಿತ ಅಪರಾಧವು ಸಾರ್ವಜನಿಕ ಸೇವಕನು ತನ್ನ ಕರ್ತವ್ಯದ ಸಂದರ್ಭದಲ್ಲಿ ತೆಗೆದುಕೊಂಡ ಯಾವುದೇ ಶಿಫಾರಸು ಅಥವಾ ನಿರ್ಧಾರಕ್ಕೆ ಸಂಬAಧಿಸಿದ್ದಾಗ ಮಾತ್ರ ಪೂರ್ವ ಮಂಜೂರಾತಿಯು ಪರಿಣಾಮಕಾರಿಯಾಗಿರುತ್ತದೆ ಎಂದು ನ್ಯಾಯಾಲಯವು ಗಮನಿಸಿದೆ.