ಶೋರ್ನೂರ್: ಅನಧಿಕೃತ ಪ್ರಯಾಣ ಮತ್ತು ರೈಲುಗಳಲ್ಲಿ ಜನದಟ್ಟಣೆಯ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವ ಯತ್ನದಲ್ಲಿ, ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಕಟ್ಟುನಿಟ್ಟಿನ ಕ್ರಮ ಆರಂಭಿಸಿದ್ದು, ಪ್ರಯಾಣಿಕರ ಸುರಕ್ಷತೆ, ಸೌಕರ್ಯ ಮತ್ತು ನಿಯಂತ್ರಕ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಈ ಉಪಕ್ರಮ ಕೈಗೊಂಡಿರುವುದಾಗಿ ರೈಲ್ವೆ ಪಾಲಕ್ಕಾಡ್ ವಿಭಾಗೀಯ ಕಚೇರಿ ಪ್ರಕಟಣೆ ತಿಳಿಸಿದೆ.
ಮುಂಬೈಯಿಂದ ಮಂಗಳೂರಿಗೆ ಸಂಚರಿಸುವ ಮಧ್ಯೆ ಕಾಯ್ದಿರಿಸಿದ ಟಿಕೆಟ್‍ನ ಬೋಗಿಯೊಂದರಲ್ಲಿ ಮಂಗಳೂರಿನ ಪ್ರಯಾಣಿಕರಿಗೆ ಉಂಟಾಗಿರುವ ಸಮಸ್ಯೆಗಳ ಬಗ್ಗೆ ರೈಲ್ವೆ ಪಾಲಕ್ಕಾಡ್ ವಿಭಾಗ ಹಾಗೂ ರೈಲ್ವೆ ಸಚಿವರಿಗೆ ನೀಡಿದ ದೂರಿನನ್ವಯ ಪಾಲಕ್ಕಾಡ್ ವಿಭಾಗ ಎಚ್ಚೆತ್ತುಕೊಂಡು ಈ ಕ್ರಮಕ್ಕೆ ಮುಂದಾಗಿದೆ.
ಅನಧಿಕೃತ ಪ್ರಯಾಣ ಮತ್ತು ಜನಸಂದಣಿಯನ್ನು ಎದುರಿಸಲು ಪಾಲಕ್ಕಾಡ್ ವಿಭಾಗವು ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ರೈಲ್ವೆ ಸಂರಕ್ಷಣಾ ಪಡೆ (ಆರ್‍ಪಿಎಫ್) ಮತ್ತು ವಾಣಿಜ್ಯ ಸಿಬ್ಬಂದಿಯನ್ನು ಒಳಗೊಂಡಿರುವ ಜಂಟಿ ತಂಡಗಳು ಈ ಸಮಸ್ಯೆ ಎದುರಿಸುತ್ತಿರುವ ರೈಲುಗಳಲ್ಲಿ ಯಾದೃಚ್ಛಿಕ ತಪಾಸಣೆ ನಡೆಸುತ್ತಿದೆ. ಈ ತಂಡಗಳು ವಿಭಾಗ ವ್ಯಾಪ್ತಿಯೊಳಗೆ ಪ್ರತಿದಿನ ಸುಮಾರು ಆರು ರೈಲುಗಳನ್ನು ಪರಿಶೀಲಿಸುತ್ತಿದ್ದು, ಎಂಟು ನಿರ್ದಿಷ್ಟ ರೈಲುಗಳು ವಿಶೇಷವಾಗಿ ಜನದಟ್ಟಣೆ ಮತ್ತು ಅನಧಿಕೃತ ಪ್ರಯಾಣಕ್ಕೆ ಒಳಗಾಗುತ್ತಿರುವುದನ್ನು ಗುರುತಿಸಲಾಗಿದೆ. 16346; 12602; 12686, 16630, 16603, 16528, 16348 ಹಾಗೂ 22852 (ವಾರಕ್ಕೊಮ್ಮೆ ಕಾರ್ಯನಿರ್ವಹಿಸುತ್ತದೆ)ಸಂಖ್ಯೆಯ ಈ ರೈಲುಗಳು ಈಗ ಪಾಲಕ್ಕಾಡ್ ವಿಭಾಗದಲ್ಲಿ ಆರ್‍ಪಿಎಫ್ ಮತ್ತು ವಾಣಿಜ್ಯ ಸಿಬ್ಬಂದಿಯನ್ನು ಒಳಗೊಂಡಿವೆ. ಈ ಕಾಯಾಚರಣೆಯಿಂದ ಅನಧಿಕೃತ ಬೋಡಿರ್ಂಗ್ ಅನ್ನು ತಡೆಯುವ ಮತ್ತು ಕಾಯ್ದಿರಿಸಿದ ಕಂಪಾರ್ಟ್‍ಮೆಂಟ್‍ಗಳನ್ನು ಕೇವಲ ಟಿಕೆಟ್ ಹೊಂದಿರುವವರು ಮಾತ್ರ ಬಳಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ನೆರವಾಗಲಿದೆ.
ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗವು ಕೈಗೊಂಡ ಉಪಕ್ರಮಗಳು ಕ್ರಮಬದ್ಧ ಮತ್ತು ಸುರಕ್ಷಿತ ರೈಲು ಪ್ರಯಾಣವನ್ನು ಖಾತ್ರಿಪಡಿಸಲಿದೆ. ನಿಯಮಿತ ತಪಾಸಣೆಗಳನ್ನು ನಡೆಸುವ ಮೂಲಕ, ಉದ್ದೇಶಿತ ರೈಲುಗಳನ್ನು ಹಿಂಬಾಲಿಸುವ ಮತ್ತು ಅಗತ್ಯ ಕ್ರಮ ಜಾರಿಗೊಳಿಸುವ ಮೂಲಕ, ವಿಭಾಗವು ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ಬದ್ಧವಾಗಿದೆ. ಟಿಕೆಟ್ ಪಡೆಯದೆ ರೈಲನ್ನೇರುವುದು, ಕಾಯ್ದಿರಿಸಿದ ಕಂಪಾರ್ಟ್‍ಮೆಂಟ್‍ಗಳಿಗೆ ಹತ್ತುವುದು ಮತ್ತು ಕಾಯ್ದಿರಿಸಿದ ಟಿಕೆಟ್ ಮೂಲಕ ಪ್ರಯಾಣಿಸುವವರಿಗೆ ಸಮಸ್ಯೆ ತಂದೊಡ್ಡುವವರನ್ನು ತಡೆಯಲು ವಿಭಾಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿರುವುದಾಗಿ ರೈಲ್ವೆ ಪಾಲಕ್ಕಾಡ್ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.