ನವದೆಹಲಿ: ಕೇರಳದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ತಂದುಕೊಟ್ಟ ಮಲಯಾಳಂ ನಟ ಸುರೇಶ್ ಗೋಪಿ ಅವರು ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ನೂತನ ಸಚಿವರಾಗಿ ಖಾತೆ ಹಂಚಿಕೆಯಾಗುವುದಕ್ಕೂ ಮುನ್ನವೇ ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಸುರೇಶ್ ಗೋಪಿ ಅವರು ಸಚಿವ ಸ್ಥಾನ ತ್ಯಜಿಸಲು ತೀರ್ಮಾನಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
'ನನಗೆ ಸಚಿವನಾಗುವುದಕ್ಕೆ ಇಷ್ಟವಿಲ್ಲ. ನಾನು ಚಿತ್ರರಂಗದಲ್ಲಿ ಮುಂದುವರಿಯಲು ಇಚ್ಚಿಸುತ್ತೇನೆ. ಹಾಗಾಗಿ ಸಂಪುಟದಿಂದ ನನ್ನನ್ನು ಕೈಬಿಡುವಂತೆ ಹೈಕಮಾಂಡ್ ಬಳಿ ಇಂಗಿತ ವ್ಯಕ್ತಪಡಿಸಿದ್ದೇನೆ' ಎಂದು ಸುರೇಶ್ ಹೇಳಿದ್ದಾರೆ.
ಸುರೇಶ್ ಗೋಪಿ ಅವರು ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಅವರು, 'ಇದು ಊಹಾಪೋಹವಷ್ಟೇ' ಎಂದು ಸ್ಪಷ್ಟಪಡಿಸಿದ್ದಾರೆ. ರಾಜೀನಾಮೆ ನೀಡುವ ಬಗ್ಗೆ ಯೋಚನೆ ಮಾಡಿಲ್ಲ ಎಂದಿದ್ದಾರೆ.
'ನನಗೆ ಸಂಸದನಾಗಿ ಕೆಲಸ ಮಾಡಬೇಕೆಂಬ ಆಸೆ ಇದೆ. ಆದರೆ, ಸಚಿವ ಸ್ಥಾನ ಅಲಂಕರಿಸಲು ನನಗೆ ಆಸಕ್ತಿ ಇಲ್ಲ ಎಂದು ಹೇಳಿದ್ದೇನೆ. ನಾನು ಹೇಗೆ ಕೆಲಸ ಮಾಡುತ್ತೇನೆ ಎಂಬುದು ತ್ರಿಶೂರ್‌ನ ಜನರಿಗೆ ಚೆನ್ನಾಗಿ ಗೊತ್ತಿದೆ. ನಾನು ಸಂಸದನಾಗಿ ಇದ್ದುಕೊಂಡು ಚಿತ್ರರಂಗದಲ್ಲೂ ಮುಂದುವರಿಯಲು ಬಯಸುತ್ತೇನೆ' ಎಂದು ತಿಳಿಸಿದ್ದಾರೆ.
ಸುರೇಶ್ ಗೋಪಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, 'ಸುರೇಶ್ ಗೋಪಿ ಅವರು ನಿನ್ನೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಖಾತೆಯನ್ನು ಇನ್ನೂ ನಿಗದಿಪಡಿಸಿಲ್ಲ. ಅಷ್ಟರಲ್ಲಾಗಲೇ ಸಚಿವ ಸ್ಥಾನ ತ್ಯಜಿಸಲು ಬಯಸುತ್ತಿದ್ದೇನೆ ಎಂದು ಹೇಳಿಕೊಂಡಿರುವುದು ಸೂಕ್ತವಲ್ಲ' ಎಂದು ಹೇಳಿದೆ.
'ನರೇಂದ್ರ ಮೋದಿ ಅವರೇ ಮತದಾರರಿಗೆ ಯಾಕೆ ಈ ಅಣಕ? ನಿಮ್ಮ ಸಂಸದರಿಗೆ ಜೀವನದಲ್ಲಿ ಏನು ಮಾಡಬೇಕೆಂದು ಮೊದಲು ನಿರ್ಧರಿಸಲು ಸೂಚನೆ ನೀಡಿ. ಮುಖ್ಯವಾಗಿ ದೇವರು ಮತ್ತು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಮುಂದೆ ಸಚಿವ ಸ್ಥಾನ ಇಷ್ಟವಿಲ್ಲ ಎಂದು ಹೇಳುವುದು ಎಷ್ಟು ಸರಿ' ಎಂದು ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.
ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ನಿಕಟವರ್ತಿ ಎಂದು ಗುರುತಿಸಿಕೊಂಡಿರುವ ಸುರೇಶ್ ಗೋಪಿ ಅವರು ಕಾಂಗ್ರೆಸ್ ಅಭ್ಯರ್ಥಿ ಮುರಳೀಧರನ್ ವಿರುದ್ಧ 74,686 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಸುರೇಶ್ ಗೋಪಿ ಅವರು ಕನಿಷ್ಠ ನಾಲ್ಕು ದೊಡ್ಡ ಬಜೆಟ್ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.