ಸಿಡ್ನಿ: ಉದ್ಯಮಿ ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್'ನಿಂದ ವಜಾಗೊಂಡ ನೌಕರರಿಗೆ ಹೆಚ್ಚುವರಿ ವೇತನ ಪಾವತಿಸಿದ್ದು, ಅದನ್ನು ಮರಳಿಸುವಂತೆ ಮಾಜಿ ನೌಕರರನ್ನು ಕಂಪನಿ ಬೆನ್ನು ಹತ್ತಿದೆ ಎಂದು ವರದಿಯಾಗಿದೆ.
ಆಸ್ಟ್ರೇಲಿಯಾದಲ್ಲಿ 18 ತಿಂಗಳ ಹಿಂದೆ ಕಂಪನಿಯಿಂದ ವಜಾಗೊಂಡ ನೌಕರರಿಗೆ ವೇತನ ಪಾವತಿ ಸಂದರ್ಭದಲ್ಲಿ ಷೇರುಗಳ ವಿನಿಮಯದಲ್ಲಿ ಆಗಿರುವ ಲೋಪದಿಂದ ಹೆಚ್ಚುವರಿಯಾಗಿ ವೇತನ ಪಾವತಿಯಾಗಿದೆ.
ಕಂಪನಿಯ ಏಷ್ಯಾ ಪೆಸಿಫಿಕ್ ಮಾನವ ಸಂಪನ್ಮೂಲ ಇಲಾಖೆಯ ಇಮೇಲ್ ಮೂಲಕ ಇ-ಮೇಲ್ ಸಂದೇಶ ಕಳುಹಿಸಲಾಗಿದೆ. 2023ರ ಜನವರಿಯಲ್ಲಿ ತಪ್ಪು ಲೆಕ್ಕದಿಂದಾಗಿ ಹೆಚ್ಚಿನ ವೇತನ ಪಾವತಿಯಾಗಿದೆ. ಅದನ್ನು ಆದಷ್ಟು ಬೇಗನ ಹಿಂದಿರುಗಿಸಿದರೆ ನಾವು ಆಭಾರಿ' ಎಂದು ಕೋರಲಾಗಿದೆ.
'ಈ ಪಾವತಿಯು ನೌಕರರು ಕಂಪನಿ ಸೇರಿದ ಸಂದರ್ಭದಲ್ಲಿ ನೀಡಲಾದ ಷೇರುಗಳನ್ನು ನಗದೀಕರಿಸುವಾಗ ಆಗಿರುವ ತಪ್ಪು ಲೆಕ್ಕದಿಂದಾಗಿ ಹೆಚ್ಚುವರಿ ಹಣ ಪಾವತಿಯಾಗಿದೆ. ಈ ಷೇರುಗಳ ತಲಾ ಮೌಲ್ಯ ಇಲಾನ್ ಮಸ್ಕ್ ಕಂಪನಿ ಖರೀದಿಸಿದಾಗ 54.20 ಅಮೆರಿಕನ್ ಡಾಲರ್ ಇತ್ತು. ಕಂಪನಿಯ ಒಪ್ಪಂದದಂತೆ ನೌಕರರಿಗೆ ಇಂತಿಷ್ಟು ಷೇರುಗಳನ್ನು ನೀಡಲಾಗಿತ್ತು. ಅದರ ಲೆಕ್ಕಾಚಾರದಲ್ಲಿ ತಪ್ಪಾಗಿದೆ ಎಂದು ತಿಳಿಸಿರುವುದಾಗಿ' ವರದಿಯಾಗಿದೆ.
ಹಣ ಮಾತ್ರವಲ್ಲದೇ, ಕಂಪನಿಗೆ ಸೇರಿದಾಗ ನೀಡಿದ್ದ ಲ್ಯಾಪ್‌ಟಾಪ್‌ಗಳನ್ನು ಮರಳಿಸುವಂತೆ ಕಂಪನಿ ಸೂಚಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ನೌಕರರು, 'ಕಂಪನಿಯ ವಸ್ತುಗಳನ್ನು ಮರಳಿಸಲು ಪ್ರಯತ್ನಿಸಲಾಯಿತು. ಆದರೆ 'ಈಗ ಕೆಲಸದ ಒತ್ತಡದಲ್ಲಿದ್ದೇವೆ. ನಂತರ ಸಂಪರ್ಕಿಸಿ' ಎಂಬ ಸ್ವಯಂ ಚಾಲಿತ ಸಂದೇಶದಿಂದ ಸುಮ್ಮನಾದೆವು' ಎಂದಿದ್ದಾರೆ.
ನೌಕರರಿಗೆ ಷೇರು ನೀಡುವ ಸೌಲಭ್ಯ ಅಮೆರಿಕದಲ್ಲಿರಬಹುದು. ಆದರೆ ಆಸ್ಟ್ರೇಲಿಯಾದಲ್ಲಿ ಇಲ್ಲ. ಹೀಗಾಗಿ ಇಂಥ ಯೋಜನೆ ಕುರಿತು ನಿರ್ದಿಷ್ಟವಾಗಿ ಹೇಳಲು ಈಗ ಸಾಧ್ಯವಿಲ್ಲ ಎಂದು ವಕೀಲೆ ವಿಕ್ಟೋರಿಯಾ ಮಾಫಟ್ ತಿಳಿಸಿದ್ದಾರೆ.
'ಕೆಲ ತಿಂಗಳ ಹಿಂದೆ ಚರ್ಚ್‌ನಲ್ಲಿ ನಡೆದ ಚೂರಿ ಇರಿತ ಪ್ರಕರಣದ ವಿಡಿಯೊವನ್ನು ಎಕ್ಸ್ ವೇದಿಕೆಯಿಂದ ತೆಗೆದುಹಾಕುವಂತೆ ಆಸ್ಟ್ರೇಲಿಯಾ ಸರ್ಕಾರ ಮಾಡಿಕೊಂಡ ಮನವಿಯನ್ನು ಮಸ್ಕ್ ನಿರಾಕರಿಸಿದ್ದರು. ಇದರಿಂದಾಗಿ ಇಬ್ಬರ ನಡುವೆ ಸಂಬಂಧ ಹಳಸಿದ್ದು, ಈ ಪ್ರಕರಣ ಯಾವ ಹಂತ ತಲುಪಲಿದೆ ಎಂಬುದನ್ನು ಕಾದುನೋಡಬೇಕು' ಎಂದು ವಿಕ್ಟೋರಿಯಾ ಹೇಳಿದ್ದಾರೆ.