ವಯನಾಡ್: ಪ್ರವಾಸಕ್ಕೆಂದು ಬಂದಿದ್ದ ವಿದೇಶಿ ಮಹಿಳೆ ಮೇಲೆ ರೆಸಾರ್ಟ್ ಉದ್ಯೋಗಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ದಾಖಲಾಗಿದೆ. ವಯನಾಡಿನ ತಿರುನೆಲ್ಲಿಯ ರೆಸಾರ್ಟ್‌ನಲ್ಲಿ ಈ ಘಟನೆ ನಡೆದಿದೆ.
ನೆದರ್ಲ್ಯಾಂಡ್ ಮೂಲದ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೆದರ್ಲ್ಯಾಂಡ್ನಿಂದ ವಯನಾಡ್ ಬಂದಿದ್ದ 25 ವರ್ಷದ ಯುವತಿ ಮೇಲೆ ಆಯುರ್ವೇದ ಮಸಾಜ್ ವೇಳೆ ಬಲವಂತವಾಗಿ ಸೆಕ್ಸ್‌ಗೆ ಒತ್ತಾಯಿಸಿದ್ದಾರೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಯುವತಿ ದೂರಿನಲ್ಲಿ ಹೇಳಿದ್ದಾಳೆ.
ವಿದೇಶಿ ಯುವತಿ ಡಿಸೆಂಬರ್ ಮೊದಲ ವಾರದಲ್ಲಿ ಆನ್‌ಲೈನ್ ಬುಕಿಂಗ್ ಮೂಲಕ ತಿರುನೆಲ್ಲಿಯ ರೆಸಾರ್ಟ್‌ಗೆ ತಲುಪಿದ್ದರು. ನೆದರ್ಲೆಂಡ್ಸ್‌ಗೆ ಮರಳಿದ ಬಳಿಕ ಆಕೆ ಎಡಿಜಿಪಿಗೆ ಇ-ಮೇಲ್ ಮೂಲಕ ದೂರು ಕಳುಹಿಸಿದ್ದಳು. ಜೂನ್ 14 ರಂದು ದೂರು ದಾಖಲಿಸಲಾಗಿದೆ. ಭಾರತದಲ್ಲಿ ದೂರು ಸಲ್ಲಿಸುವ ವಿಧಾನಗಳು ತಿಳಿದಿಲ್ಲದ ಕಾರಣ ದೂರು ನೀಡಲು ವಿಳಂಬವಾಗಿದೆ ಎಂದು ಮಹಿಳೆ ಹೇಳಿದ್ದಾರೆ. ಆದರೆ, ದೂರು ಸ್ವೀಕರಿಸಿ ವಾರ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿವಿಧ ಸಂಘಟನೆಗಳು ಆರೋಪಿಸಿವೆ.
ಆದರೆ, ಘಟನೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದರೂ ದೂರಿನಲ್ಲಿ ನಮೂದಿಸಿರುವ ಮಾಹಿತಿ ಪೂರ್ಣವಾಗದ ಕಾರಣ ಪ್ರಕರಣವನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.