ಮುಳ್ಳೇರಿಯ: ಸಿಪಿಎಂ ಅಧೀನದಲ್ಲಿರುವ ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋಓಪರೇಟಿವ್ ಸೊಸೈಟಿಯಲ್ಲಿ ನಡೆದಿರುವ ಭಾರೀ ವಂಚನಾ ಹಗರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಸಿಪಿಐ-ಎಂ ಮುಳ್ಳೇರಿಯ ಮಾಜಿ ಸ್ಥಳೀಯ ಸಮಿತಿ ಸದಸ್ಯ ಮತ್ತು ಬ್ಯಾಂಕ್ ಕಾರ್ಯದರ್ಶಿ ಕೆ. ರತೀಶನ್ ಮತ್ತು ಅವರ ಸ್ನೇಹಿತ ಜಬ್ಬಾರ್ ಬಂಧಿತರು. ತಮಿಳುನಾಡಿನ ನಾಮಕ್ಕಲ್‍ನ ವಸತಿಗೃಹವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ಆರೋಪಿಗಳು ಮೊಬೈಲ್ ಬಳಸದಿರುವುದು ಪೊಲೀಸರ ತನಿಖೆಗೆ ಹಿನ್ನಡೆಯನ್ನುಂಟುಮಾಡಿತ್ತು. ರತೀಶನ ಸಂಬಂಧಿಕರು ಮತ್ತು ಸ್ನೇಹಿತರನ್ನು ಕೇಂದ್ರೀಕರಿಸಿ ಪೊಲೀಸರು ನಡೆಸಿದ ತನಿಖೆ ನಡೆಸುವ ಮೂಲಕ ನಾಮಕ್ಕಲ್ ವಸತಿಗೃಹದಲ್ಲಿ ತಲೆಮರೆಸಿಕೊಂಡು ವಾಸಿಸುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಪ್ರಕರಣದ ಪ್ರಮುಖ ಆರೋಪಿ, ಬ್ಯಾಂಕ್ ಕಾರ್ಯದರ್ಶಿಯಾಗಿದ್ದ ಕೆ.ರತೀಶನ್, ಕಾರಡ್ಕ ಸೊಸೈಟಿಯಿಂದ 4.76 ಕೋಟಿ ರೂ. ವಂಚನೆ ನಡೆಸಿದ್ದನು. ಆರೋಪಿಗಳನ್ನು ಕಾಸರಗೋಡಿಗೆ ಕರೆತರಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.