ನವದೆಹಲಿ: ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ಕೆಲವು ಅಕ್ರಮಗಳು ಬೆಳಕಿಗೆ ಬಂದಿವೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಭಾನುವಾರ ಹೇಳಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಲ್ಲಿ (ಎನ್‌ಟಿಎ) ಸುಧಾರಣೆಯ ಅಗತ್ಯವಿದೆ. ಸಂಸ್ಥೆಯ ಹಿರಿಯ ಅಧಿಕಾರಿಗಳು ತಪ್ಪಿತಸ್ಥರೆಂದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನ್ ಎಚ್ಚರಿಕೆ ನೀಡಿದರು.
ಪ್ರಕರಣದ ಹಿನ್ನೆಲೆ:
ಮೇ 5ರಂದು ದೇಶದ 4,750 ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆದಿತ್ತು. ಸುಮಾರು 24 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಜೂನ್ 14ರಂದು ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇತ್ತು. ಆದರೆ ಎನ್‌ಟಿಎ ಜೂನ್ 4ರಂದೇ ಫಲಿತಾಂಶ ಪ್ರಕಟಿಸಿತ್ತು.
ಹರಿಯಾಣದ ಫರೀದಾಬಾದ್‌ನ ಕೇಂದ್ರದ ಆರು ಮಂದಿ ಸೇರಿ, ದೇಶದಾದ್ಯಂತ 67 ಅಭ್ಯರ್ಥಿಗಳು 720ಕ್ಕೆ 720 ಅಂಕಗಳನ್ನು ಪಡೆದು ಅಗ್ರ ಸ್ಥಾನ ಹಂಚಿಕೊಂಡಿದ್ದರು. ಕೆಲ ಅಭ್ಯರ್ಥಿಗಳಿಗೆ ಕೃಪಾಂಕವನ್ನು ಎನ್‌ಟಿಎ ನೀಡಿದ್ದು ಮತ್ತು ಒಂದೇ ಕೇಂದ್ರದ ಕೆಲವರು ಗರಿಷ್ಠ ಅಂಕಗಳನ್ನು ಗಳಿಸಿದ್ದು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.