ಕಾಸರಗೋಡು: ಜಿಲ್ಲೆ ಸೇರಿದಂತೆ ಕೇರಳಾದ್ಯಂತ ಭಾರಿ ಮಳೆಯಾಗುತ್ತಿದ್ದು, ಹೊಳೆಗಳು ತುಂಬಿ ಹರಿಯುತ್ತಿದ್ದರೆ, ತಗ್ಗು ಪ್ರದೇಶದಲ್ಲಿ ನೀರುತುಂಬಿಕೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಕಾಸರಗೋಡು ಮಧೂರು ಮಧುವಾಹಿನಿ ಹೊಳೆ ತುಂಬಿ ಹರಿಯುತ್ತಿದ್ದು, ಇತಿಹಾಸಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಜಲಾವೃತಗೊಂಡಿದೆ.
ದೇವಸ್ಥಾನದಲ್ಲಿ ಬೆಳಗ್ಗಿನ ಪೂಜೆ ಮುಗಿಯುತ್ತಿದ್ದಂತೆ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿದ್ದು, ಗರ್ಭಗುಡಿ ವರೆಗೂ ನೀರು ತುಂಬಿಕೊಂಡಿದೆ. ಶ್ರೀಮಹಾಗಣಪತಿಗೆ ಅಪ್ಪ ನೈವೇದ್ಯ ತಯಾರಿಸುವ ಅಡುಗೆ ಕೊಠಡಿಯಲ್ಲಿ ನೀರುತುಂಬಿಕೊಂಡಿದ್ದರೂ, ಒಲೆ ಎತ್ತರದಲ್ಲಿರುವುದರಿಂದ ನೈವೇದ್ಯ ತಯಾರಿಗೆ ಯಾವುದೇ ಅಡಚಣೆಯುಂಟಾಗಿಲ್ಲ. ಅರ್ಚಕರು, ಸಿಬ್ಬಂದಿ, ಸೊಂಟದ ವರೆಗಿನ ನೀರಿನಲ್ಲೇ ಸಂಚರಿಸಿ, ಕರ್ತವ್ಯ ನಿರ್ವಹಿಸಿದರು. ಬಿರುಸಿನ ಮಳೆ ಹಿನ್ನೆಲೆಯಲ್ಲಿ ಭಕ್ತಾದಿಗಳ ಸಂಖ್ಯೆ ವಿರಳವಾಗಿದ್ದು, ಭಕ್ತಾದಿಗಳು ನೀರಲ್ಲೇ ನಿಂತು ಶ್ರೀದೇವರ ದರ್ಶನಪಡೆದರು.
ಪ್ರತಿವರ್ಷ ಎರಡರಿಂದ ಮೂರು ಬಾರಿ ಮಧುವಾಹಿನಿ ಹೊಳೆ ನೆರೆಯಲ್ಲಿ ಉಕ್ಕೇರುತ್ತಿದ್ದು, ಮಧೂರು ದೇಗುಲದ ಗರ್ಭಗುಡಿವರೆಗೂ ನೀರು ತುಂಬಿಕೊಳ್ಳುತ್ತಿದೆ. ದೇಗುಲದ ಜೀರ್ಣೋದ್ಧಾರ ಕಾಮಗಾರಿ ಭರದಿಂದ ಸಾಗುತ್ತಿದ್ದು, ನೆರೆನೀರು ನುಗ್ಗದಂತೆ ತಡೆಗೋಡೆ ನಿರ್ಮಾಣಕ್ಕಾಗಿ ಭಕ್ತಾದಿಗಳು ದೀರ್ಘಕಾಳದಿಂದ ಬೇಡಿಕೆ ಮುಂದಿರಿಸಿದ್ದಾರೆ.