ಮುಂಬೈ/ಪುಣೆ(PTI): 'ವರ್ಷಾಂತ್ಯಕ್ಕೆ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸ್ಥಾನಗಳ ಹಂಚಿಕೆಗೆ ಸಂಬಂಧಿಸಿ ಮಹಾ ವಿಕಾಸ ಅಘಾಡಿ (ಎಂವಿಎ) ಅಂಗಪಕ್ಷಗಳ ನಡುವೆ ಮಾತುಕತೆ ಆರಂಭವಾಗಿಲ್ಲ. ಆದರೆ, ಈ ವಿಷಯದಲ್ಲಿ ಎಲ್ಲ ಪಕ್ಷಗಳು ಸಮಾನ ಭಾಗೀದಾರಿಕೆ ಹೊಂದಿವೆ' ಎಂದು ಶಿವಸೇನಾ (ಯುಬಿಟಿ) ರಾಜ್ಯಸಭೆ ಸದಸ್ಯ ಸಂಜಯ್ ರಾವುತ್ ಶನಿವಾರ ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಎನ್‌ಸಿಪಿ(ಶರದ್ ಪವಾರ್ ಬಣ) ಕೆಲವೇ ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆದರೆ, ವಿಧಾನಸಭೆ ಚುನಾವಣೆಯ ಪರಿಸ್ಥಿತಿ ಬೇರೆ ಎಂಬ ಎನ್‌ಸಿಪಿ (ಎಸ್‌ಪಿ) ಮುಖಂಡರೊಬ್ಬರ ಹೇಳಿಕೆಗೆ ರಾವುತ್ ಹೀಗೆ ಪ್ರತಿಕ್ರಿಯಿಸಿದ್ದಾರೆ.
'ಸ್ಥಾನ ಹಂಚಿಕೆ ಕುರಿತು ಮಾತುಕತೆಯೇ ಆರಂಭವಾಗಿಲ್ಲ. ಹೀಗಾಗಿ ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತದೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅಲ್ಲದೇ, ಎಂವಿಎನಲ್ಲಿ ಎಲ್ಲ ಪಕ್ಷಗಳು ಸಮಾನ ಹಕ್ಕು ಹೊಂದಿವೆ' ಎಂದು ರಾವುತ್ ಹೇಳಿದ್ದಾರೆ.