ಬದಿಯಡ್ಕ: ಬದುಕಿನಲ್ಲಿ ಏಕಾಗ್ರತೆ ಎಂಬುದು ಅತೀ ಮುಖ್ಯವಾಗಿದೆ. ಯೋಗದ ಮೂಲಕ ಏಕಾಗ್ರತೆಯನ್ನು ಗಳಿಸಲು ಸಾಧ್ಯವಿದೆ. ಯಮನಿಯಮಗಳನ್ನು ಪಾಲಿಸಿಕೊಂಡು ಸತ್ಯಸಂಹಿತರಾಗಿ ನಾವು ಬಾಳಬೇಕು ಎಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜರಗಿದ ವಿಶ್ವ ಯೋಗದಿನಾಚರಣೆಯಲ್ಲಿ ಶಾಲಾ ಅಧ್ಯಾಪಿಕೆ ಯೋಗಪಟು ಮಮತಾ ಸಾವಿತ್ರಿ ಚಾಳೆತ್ತಡ್ಕ ಹೇಳಿದರು.
ಆಸನ ಮತ್ತು ಪ್ರಾಣಾಯಾಮಗಳ ಅಧ್ಯಯನದಿಂದ ಆತ್ಮ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಬೇಕು. ಯಾವುದೇ ಭಂಗಿಯಲ್ಲಿ ನಾವಿದ್ದರೂ ಅಲ್ಲಿ ಸ್ಥಿರತೆಯಿದ್ದರೆ ಮಾತ್ರ ಅದನ್ನು ಆಸನ ಎಂದು ಹೇಳಬಹುದು. ಉಸಿರಾಟವು ಸಮತೋಲನದಲ್ಲಿರಲು ಪ್ರಾಣಾಯಾಮ ಅತೀ ಅಗತ್ಯ ಎಂದರು. ಯೋಗದ ಮೂಲಕವೂ ನಮ್ಮೀ ಶಾಲೆಯು ಗುರುತಿಸಲ್ಪಟ್ಟಿದೆ. ಯೋಗದಿಂದ ಆರೋಗ್ಯವೃದ್ಧಿಯಾಗುತ್ತದೆ. ಜೀವನವನ್ನು ಚೆನ್ನಾಗಿ ರೂಪಿಸುವಲ್ಲಿ ಈ ಶಾಲೆಯು ನಿಮಗೆ ಸಹಕಾರಿಯಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಮಾತನಾಡಿ ಚಿಕ್ಕಪ್ರಾಯದಲ್ಲಿಯೇ ಪ್ರಾಣಾಯಾಮ, ಯೋಗವನ್ನು ಮಾಡುವುದು ನಮ್ಮ ಶರೀರಕ್ಕೆ ಉತ್ತಮ ಪ್ರಚೋದನೆಯನ್ನು ನೀಡುತ್ತದೆ. ಸರಿಯಾದ ಆಸನದಲ್ಲಿ ಕುಳಿತಾಗ ಸುಂದರವಾದ ಕಳೆ, ಆತ್ಮಸ್ಥೈರ್ಯ, ಆತ್ಮಬಲ ಬರುತ್ತದೆ. ಯೋಗವನ್ನು ಉಳಿಸಿಕೊಂಡು ಬುದ್ಧಿಯನ್ನು ಜಾಗೃತಗೊಳಿಸಬೇಕು ಎಂದರು.
ಯೋಗಶಿಕ್ಷಕ ವಿನಯಪಾಲ್ ಮಾತನಾಡಿ ಭಾರತೀಯರಾದ ನಾವೆಲ್ಲ ಹೆಮ್ಮೆಪಡುವ ದಿನ ಇದಾಗಿದೆ. ಪ್ರಪಂಚದ ಎಲ್ಲಾ ಕಡೆಗಳಲ್ಲಿಯೂ ಯೋಗದಿನಾಚರಣೆ ಸಂಭ್ರಮದಿಂದ ಆಚರಿಸುವುದಕ್ಕೆ ನಮ್ಮ ದೇಶ ಕಾರಣ ಎಂಬುದು ನಮಗೆಲ್ಲಾ ಹೆಮ್ಮೆ. ನೈಸರ್ಗಿಕವಾದ ಗಾಳಿ ಬೆಳಕು ಇರುವಂತಹ ಸ್ಥಳದಲ್ಲಿ ಯೋಗಾಸನಗಳನ್ನು ಮಾಡಬೇಕು ಎಂದರು.
ಶಾಲಾ ಮಾತೃಸಂಘದ ಅಧ್ಯಕ್ಷೆ ಶಿಲ್ಪಾಕಾಮತ್ ಉಪಸ್ಥಿತರಿದ್ದು ಶುಭಹಾರೈಸಿದರು. ನಂತರ ಮಕ್ಕಳಿಂದ ಸಾಮೂಹಿಕ ಸೂರ್ಯನಮಸ್ಕಾರ ಹಾಗೂ ಪ್ರತೀ ತರಗತಿ ಎಲ್ಲಾ ವಿದ್ಯಾರ್ಥಿಗಳಿಂದ ವೇದಿಕೆಯಲ್ಲಿ ಯೋಗಪ್ರದರ್ಶನ ನಡೆಯಿತು.
ಅಭಿಮತ: ಪ್ರತೀದಿನ 12 ನಿಮಿಷಗಳ ಕಾಲ ನೆಲದ ಮೇಲೆ ಸುಖಾಸನದಲ್ಲಿ ಕುಳಿತು ಮಾಡುವ ಪ್ರಾರ್ಥನೆ ಮಕ್ಕಳ ಬುದ್ಧಿಶಕ್ತಿಗೆ ಪ್ರಚೋದನೆಯನ್ನು ನೀಡುತ್ತದೆ.
- ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಮುಖ್ಯೋಪಾಧ್ಯಾಯರು, ಶ್ರೀ ಭಾರತೀ ವಿದ್ಯಾಪೀಠ ಬದಿಯಡ್ಕ