ಲಂಡನ್: ಬ್ರಿಟಿಷ್ ರಾಜಪ್ರಭುತ್ವದಲ್ಲಿ ಮಹತ್ವದ ಸಂಪ್ರದಾಯವಾಗಿರುವ ಕಿಂಗ್ ಚಾರ್ಲ್ಸ್ ಅವರ ಜನ್ಮದಿನಾಚರಣೆಯಾದ ಟ್ರೂಪಿಂಗ್ ದಿ ಕಲರ್ ಸಮಾರಂಭವು ಶನಿವಾರ(ಜೂನ್ 15) ರಂದು ಹಾರ್ಸ್ ಗಾರ್ಡ್ಸ್ ಪರೇಡ್‌ನಲ್ಲಿ ನಡೆಯಿತು. ಇದರ ಫೋಟೋ ಮತ್ತು ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಸೆಕ್ಯೂರಿಟಿ ಗಾರ್ಡ್ ಮಾಡಿದ ಆ ಒಂದು ಕೆಲಸದ ವೀಡಿಯೋ ವೈರಲ್ ಆಗಿದೆ.
ಬಕಿಂಗ್ಹ್ಯಾಂ ಅರಮನೆಯ ಬಾಲ್ಕನಿಯಲ್ಲಿ ರಾಜಮನೆತನದ ಕುಟುಂಬವು ಕಾಣಿಸಿಕೊಳ್ಳುವ ಕೆಲವೇ ಕ್ಷಣಗಳ ಮೊದಲು ಒಬ್ಬ ಕಾವಲುಗಾರನು ತನ್ನ ಗೆಳತಿಗೆ ಲವ್ ಪ್ರಪೋಸ್ ಮಾಡುವುದನ್ನು ಒಳಗೊಂಡಿರುವ ವೀಡಿಯೊವು ಅನೇಕರ ಹೃದಯ ದೋಚಿದೆ.
ಈ ಹೃದಯಸ್ಪರ್ಶಿ ಕ್ಷಣವನ್ನು ಬ್ರಿಟಿಷ್ ಮಾಧ್ಯಮ ಸಂಸ್ಥೆ ಡೈಲಿ ಮೇಲ್ ಆನ್‌ಲೈನ್ X ನಲ್ಲಿ ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡಿದೆ.
ವೀಡಿಯೋ ಪ್ರಾರಂಭದಲ್ಲಿ ರಾಯಲ್ ಗಾರ್ಡ್ ತನ್ನ ಗೆಳತಿಯನ್ನು ಅಪ್ಪಿಕೊಳ್ಳುವುದಕ್ಕೆ ಸಾಕ್ಷಿಯಾಗಿದೆ. ಅದು ಮುಂದುವರೆದಂತೆ ಆತ ಅವಳನ್ನು ಚುಂಬಿಸುತ್ತಾನೆ. ನಂತರ ಅವಳ ಬೆರಳಿಗೆ ಉಂಗುರ ಹಾಕುತ್ತಾನೆ. ಬಳಿಕ ಇವರು ಕ್ಷಣಾರ್ಧದಲ್ಲಿ ದಂಪತಿಯಾಗುತ್ತಾರೆ. ಕೂಡಲೇ ಇಬ್ಬರೂ ಬಿಗಿದಪ್ಪಿಕೊಳ್ಳುತ್ತಾರೆ. ಇನ್ನೇನು ರಾಜನ ಹುಟ್ಟು ಹಬ್ಬ ಕಾರ್ಯಕ್ರಮ ಪ್ರಾರಂಭವಾಗುತ್ತದೆ ಎನ್ನುವಷ್ಟರಲ್ಲಿ ಯುವತಿ ಹೊರಡಲು ಮುಖ್ಯ ದ್ವಾರದ ಕಡೆಗೆ ಓಡುತ್ತಾಳೆ. ಆಗ ಮದುಮಗ ಸೆಕ್ಯೂರಿಟಿ ಗಾರ್ಡ್ ತನ್ನ ಕರ್ತವ್ಯ ನಿರ್ವಹಿಸಲು ಅರಮನೆ ದ್ವಾರದ ಕಡೆ ಹೊರಟು, ಮತ್ತೆ ವಾಪಸ್ಸಾಗಿ ಕೊನೆಯ ಬಾರಿಗೆ ಅವಳನ್ನು ಚುಂಬಿಸುತ್ತಾನೆ. ಇದು ಹೃದಯಸ್ಪರ್ಷಿ ಕ್ಷಣವಾಗಿದ್ದು, ಇಬ್ಬರೂ ಹೊರಟು ಹೋಗುತ್ತಾರೆ.
ಜೂನ್ 15 ರಂದು ಪೋಸ್ಟ್ ಮಾಡಿದ ನಂತರ, ವೀಡಿಯೊ 190,000 ವೀಕ್ಷಣೆ ಪಡೆದುಕೊಂಡಿದೆ. ವೀಕ್ಷಕರ ಸಂಖ್ಯೆ ಏರುತ್ತಲೇ ಇದೆ. ಕ್ಲಿಪ್ ವ್ಯಾಪಕವಾದ ಪ್ರತಿಕ್ರಿಯೆಗಳನ್ನು ಗಳಿಸಿದೆ. ಅನೇಕ ಜನರು ತಮ್ಮ ಸಂತೋಷ ಮತ್ತು ಹಾರೈಕೆಯನ್ನು ದಂಪತಿಗೆ ತಿಳಿಸಿದ್ದಾರೆ.
ಒಬ್ಬ ವೀಕ್ಷಕ 'ಲವ್ಲಿ' ಎಂದು ಕಾಮೆಂಟ್ ಮಾಡುವ ಮೂಲಕ ರಾಯಲ್ ಗಾರ್ಡ್‌ನ ಗೆಸ್ಚರ್ ಅನ್ನು ಮೆಚ್ಚಿದರೆ, ಮತ್ತೊಬ್ಬರು, 'ಸಮಯವು ವ್ಯಕ್ತಿಯ ಬಗ್ಗೆ ಬಹಳಷ್ಟು ಹೇಳುತ್ತದೆ. ಎಂತಹ ಉತ್ತಮ ಸಮಯ. ಅವರಿಗೆ ಶುಭ ಹಾರೈಸು!' ಎಂದರೆ, ಮೂರನೆಯ ವೀಕ್ಷಕ 'ಅಭಿನಂದನೆಗಳು, ನಿಮಗೆ ಶುಭ ಹಾರೈಸುತ್ತೇನೆ' ಎಂದು ಬರೆದಿದ್ದಾರೆ.
ಟ್ರೂಪಿಂಗ್ ದಿ ಕಲರ್ ವಾರ್ಷಿಕ ಸಾಂಪ್ರದಾಯಿಕ ಕಾರ್ಯಕ್ರಮವಾಗಿದ್ದು ಅದು ಬ್ರಿಟಿಷ್ ಸಾರ್ವಭೌಮತ್ವದ ಅಧಿಕೃತ ಜನ್ಮದಿನವನ್ನು ಸೂಚಿಸುತ್ತದೆ. ಇದನ್ನು 260 ವರ್ಷಗಳಿಂದ ಆಚರಿಸಲಾಗುತ್ತಿದೆ. ರಾಜಮನೆತನದ ಅಧಿಕೃತ ವೆಬ್‌ಸೈಟ್ ಪ್ರಕಾರ, ಸಮಾರಂಭವು 1,400 ಕ್ಕೂ ಹೆಚ್ಚು ಪರೇಡಿಂಗ್ ಸೈನಿಕರು, 200 ಕುದುರೆಗಳು ಮತ್ತು 400 ಸಂಗೀತಗಾರರನ್ನು ಒಳಗೊಂಡಿರುತ್ತದೆ.