ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಬಾಲ್ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೂ ಅಧಿಕಾರಿಗಳು ಚರ್ಚಿಸಿದ್ದಾರೆ. ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜನೆ ಮತ್ತು ಭಯೋತ್ಪಾದನೆ ನಿಗ್ರಹ ಕಾರ್ಯತಂತ್ರದ ಬಗ್ಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜೊತೆಗೂ ಮಾತನಾಡಿದ ಮೋದಿ, ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಸ್ಥಳೀಯ ಆಡಳಿತಗಳ ಮೂಲಕ ಕೈಗೊಂಡಿರುವ ಕ್ರಮಗಳ ಬಗ್ಗೆ ಸಿನ್ಹಾ ಮೋದಿಗೆ ವಿವರಿಸಿದರು.
ಜಮ್ಮು ಮತ್ತು ಕಾಶ್ಮೀರದ ಭದ್ರತೆ ಕುರಿತಾದ ಸಂಪೂರ್ಣ ಚಿತ್ರಣವನ್ನು ಮೋದಿಗೆ ಅಧಿಕಾರಿಗಳು ನೀಡಿದ್ದಾರೆ. ಅಲ್ಲದೆ, ಉಗ್ರರ ನಿಗ್ರಹಕ್ಕೆ ಬೇಕಾದ ಕ್ರಮ ತೆಗೆದುಕೊಂಡಿರುವ ಬಗ್ಗೆಯೂ ವಿವರಿಸಿದ್ದಾರೆ.
ಕಳೆದ ನಾಲ್ಕು ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ರಿಯಾಸಿ, ಕಥುವಾ ಮತ್ತು ದೋಡಾ ಜಿಲ್ಲೆಗಳಲ್ಲಿ 4 ಕಡೆ ಉಗ್ರರು ದಾಳಿ ನಡೆಸಿದ್ದಾರೆ. 9 ಯಾತ್ರಾರ್ಥಿಗಳನ್ನು ಕೊಂದಿರುವ ಉಗ್ರರು, ಸಿಆರ್‌ಪಿಎಫ್‌ನ ಒಬ್ಬ ಯೋಧ, 7 ಮಂದಿ ಭದ್ರತಾ ಸಿಬ್ಬಂದಿ ಸೇರಿ ಇತರರನ್ನು ಗಾಯಗೊಳಿಸಿದ್ದಾರೆ.
ಕಥುವಾದಲ್ಲಿ ಭದ್ರತಾ ಪಡೆಗಳ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಶಂಕಿತ ಪಾಕಿಸ್ತಾನದ ಭಯೋತ್ಪಾದಕರು ಹತರಾಗಿದ್ದಾರೆ. ಅಪಾರ ಪ್ರಮಾಣದ ಮದ್ದು ಗುಂಡುಗಳನ್ನೂ ಅವರಿಂದ ವಶಕ್ಕೆ ಪಡೆಯಲಾಗಿದೆ.
ಭಾನುವಾರ ಕಾತ್ರಾದ ಶಿವ ಖೋರಿ ಮಂದಿರದಿಂದ ವೈಷ್ಣೋದೇವಿ ಮಂದಿರಕ್ಕೆ ತೆರಳುತ್ತಿದ್ದ 53 ಸೀಟಿನ ಯಾತ್ರಾರ್ಥಿಗಳ ಬಸ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಬಳಿಕ ಬಸ್ ಕಂದಕಕ್ಕೆ ಉರುಳಿ 9 ಮಂದಿ ಮೃತಪಟ್ಟಿದ್ದರು. ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಯಾತ್ರಾರ್ಥಿಗಳು ಬಸ್‌ನಲ್ಲಿದ್ದರು.
ಮಂಗಳವಾರ, ಭದೇರ್ವಾಹ್‌ನ ಚಟರ್‌ಗಲ್ಲದಲ್ಲಿ 4ನೇ ರಾಷ್ಟ್ರೀಯ ರೈಫಲ್ಸ್ ಮತ್ತು ಪೊಲೀಸರ ಜಂಟಿ ಚೆಕ್‌ಪೋಸ್ಟ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಬುಧವಾರ ಗಂಧೋ ಪ್ರದೇಶದಲ್ಲಿ ಶೋಧ ತಂಡದ ಮೇಲೆ ದಾಳಿ ನಡೆಸಿದ್ದು, ಒಬ್ಬ ಪೊಲೀಸ್ ಸೇರಿದಂತೆ ಏಳು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ.