ಕರ್ನಾಟಕ, ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಲ್ಲಿ ಸದ್ದು ಮಾಡಿದ ಮಂಜುಮ್ಮೆಲ್ ಬಾಯ್ಸ್, ಸದ್ಯ ದೊಡ್ಡ ಸಂಕಷ್ಟದಲ್ಲಿ ಸಿಲುಕಿರುವ ವಿಷಯ ಸಿನಿಪ್ರಿಯರಲ್ಲಿ ಭಾರೀ ಅಚ್ಚರಿ ಮೂಡಿಸಿದೆ.
ಇತ್ತೀಚಿನ ಯಶಸ್ವಿ ಮಲಯಾಳಂ ಚಲನಚಿತ್ರಗಳಲ್ಲಿ 'ಮಂಜುಮ್ಮೆಲ್ ಬಾಯ್ಸ್' ಕೂಡ ಒಂದಾಗಿದ್ದು, ಬಹುತೇಕ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುವ ಮೂಲಕ ಜಾಗತಿಕ ಮಟ್ಟದಲ್ಲಿ 200 ಕೋಟಿ ರೂ. ಆದಾಯ ಗಳಿಸಿತು. ಈ ಹಿಂದಿನ ದಾಖಲೆಗಳನ್ನು ಪುಡಿಪುಡಿ ಮಾಡುವ ಮೂಲಕ ಮಾಲಿವುಡ್‌ನಲ್ಲಿ ತನ್ನದೇ ಹೊಸ ದಾಖಲೆ ಬರೆದ ಈ ಚಿತ್ರಕ್ಕೆ 'ಇಂಡಸ್ಟ್ರಿ ಹಿಟ್' ಎಂಬ ಪಟ್ಟವು ಲಭಿಸಿದೆ.
ದಾಖಲೆ ಬರೆಯುವ ಮೂಲಕ ಸಿನಿಪ್ರೇಕ್ಷಕರಲ್ಲಿ ಭರವಸೆ, ಖುಷಿ ತಂದಿದ್ದ 'ಮಂಜುಮ್ಮೆಲ್ ಬಾಯ್ಸ್' ನಿರ್ಮಾಪಕರು, ಇದೀಗ ಕೆಲವು ಕಾರಣಾಂತರಗಳಿಂದ ಮಲಯಾಳಂ ಚಿತ್ರರಂಗವನ್ನು ದೊಡ್ಡ ಸಂಕಷ್ಟಕ್ಕೆ ತಂದಿಟ್ಟಿದ್ದಾರೆ. ತಯಾರಕರು ಚಿತ್ರದ ಲಾಭ ಹಂಚಿಕೆಯ ವಿವಾದಕ್ಕೆ ಸಿಲುಕಿದ್ದಾರೆ. ಈ ಸಿನಿಮಾ ಸಣ್ಣ ಬಜೆಟ್‌ನ ಚಲನಚಿತ್ರವಾಗಿ ಬಿಡುಗಡೆಯಾಗಿದ್ದೇ ಆದರೂ ಆಶ್ಚರ್ಯಕರ ರೀತಿಯಲ್ಲಿ ಮಾಲಿವುಡ್‌ನ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿತು.
ಲಾಭ ಹಂಚಿಕೆಯ ವಿಚಾರವೇ ಈ ಹಣಕಾಸಿನ ವಿವಾದಗಳ ಹಿಂದಿರುವ ಪ್ರಮುಖ ಕಾರಣ ಎಂಬುದು ವರದಿ. ಸದ್ಯ ಈ ವಿಚಾರ ಮಾಲಿವುಡ್‌ನಲ್ಲಿ ಕಪ್ಪುಹಣದ ಅಭ್ಯಾಸಗಳು ಚಾಲ್ತಿಯಲ್ಲಿವೆ ಎಂಬುದರ ಬಗ್ಗೆ ದೂರು ನೀಡಲು ಇತರ ಚಿತ್ರ ತಯಾರಕರನ್ನು ಪ್ರಚೋದಿಸಿದೆ. ಈ ಹಿಂದೆ ಸಂಗೀತ ದಿಗ್ಗಜ, ಹಿರಿಯ ಸಂಗೀತ ನಿರ್ದೇಶಕ ಇಳಯರಾಜ, ತಮ್ಮ ಅನುಮತಿಯಿಲ್ಲದೆ ಚಿತ್ರತಂಡ 'ಗುಣ' ಚಿತ್ರದ ಹಾಡನ್ನು ಬಳಸಿಕೊಂಡಿದೆ ಎಂದು ಆರೋಪಿಸಿದ್ದರು. ಈ ಮೂಲಕ ಭಾರೀ ವಿವಾದಕ್ಕೆ ಸಿಲುಕಿದ್ದ 'ಮಂಜುಮ್ಮೆಲ್ ಬಾಯ್ಸ್' ಇದೀಗ ಮತ್ತೊಮ್ಮೆ ವಿವಾದದ ಅಲೆಯಲ್ಲಿ ಸಿಲುಕಿದೆ.