HEALTH TIPS

ಮತ ವಿಭಜನೆ: ಕೊನೆ ಕ್ಷಣದಲ್ಲಿ ಹಿಂದೆ ಸರಿದ 'ಇಂಡಿಯಾ'

Top Post Ad

Click to join Samarasasudhi Official Whatsapp Group

Qries

         ವದೆಹಲಿ: ಲೋಕಸಭಾ ಸ್ಫೀಕರ್ ಚುನಾವಣೆಯಲ್ಲಿ ಮತ ವಿಭಜನೆಯ ಬೇಡಿಕೆ ಇಡುವುದಕ್ಕಾಗಿ 'ಇಂಡಿಯಾ' ಒಕ್ಕೂಟ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು.

          ಆದರೆ, ಮೈತ್ರಿಕೂಟದ ಕೆಲವು ಪಕ್ಷಗಳು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ, ಮೈತ್ರಿಯಲ್ಲಿ ಬಿರುಕು ಇರುವುದು ಬಹಿರಂಗವಾಗುವ ಭಯದಿಂದ ಮತ ವಿಭಜನೆಯ ಯೋಜನೆಯನ್ನು ಕೈಬಿಟ್ಟಿತು.

ಸದನದಲ್ಲಿ ನಡೆಯುವ ಮತದಾನದ ಪ್ರಕ್ರಿಯೆಯ ಬಗ್ಗೆ ಸಂಸತ್ತಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್‌ ತನ್ನ ಸಂಸದರಿಗೆ ಮಾಹಿತಿ ನೀಡಿತ್ತು. ಧ್ವನಿ ಮತ ಅಥವಾ ಮತ ವಿಭಜನೆ ಬಗ್ಗೆ ತೃಣಮೂಲ ಕಾಂಗ್ರೆಸ್‌ ಕೈಗೊಳ್ಳುವ ನಿರ್ಧಾರದ ಬಗ್ಗೆ ಅದು ಕಾದಿತ್ತು.

           'ಧ್ವನಿ ಮತ ಅಥವಾ ಮತ ವಿಭಜನೆ ಕುರಿತಂತೆ ಕಾಂಗ್ರೆಸ್‌ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ತಿಳಿಸಲಾಗಿತ್ತು' ಎಂದು ಟಿಎಂಸಿ ಮೂಲಗಳು ಹೇಳಿವೆ.

             ಆದರೆ, ಧ್ವನಿ ಮತಕ್ಕೆ ಹೋಗುವುದು ತನಗೆ ಇಷ್ಟ ಇಲ್ಲದಿರುವುದರ ಬಗ್ಗೆ ಟಿಎಂಸಿ ಮನವರಿಕೆ ಮಾಡಿತ್ತು ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಂದ ಸೂಚನೆ ಬಂದ ಬಳಿಕ, ಕಲ್ಯಾಣ್‌ ಬ್ಯಾನರ್ಜಿ ಸೇರಿದಂತೆ ತೃಣಮೂಲ ಕಾಂಗ್ರೆಸ್‌ ಮುಖಂಡರು, ತಮ್ಮ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಸದಸ್ಯರಿಲ್ಲ, ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಈಶಾನ್ಯ ಭಾಗದ ಸಂಸದರು ಬೆಂಬಲ ನೀಡಿದರೆ ಎನ್‌ಡಿಎಯ ಸಂಖ್ಯಾ ಬಲ ಹೆಚ್ಚಲಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದರು.

          ಸಂಖ್ಯಾ ಬಲವನ್ನು ಮುಂದಿಟ್ಟುಕೊಂಡು ಮತದಾನಕ್ಕಾಗಿ ಒತ್ತಾಯ ಮಾಡುವುದು ಉತ್ತಮ ಕಾರ್ಯತಂತ್ರವಲ್ಲ ಎಂದು ಟಿಎಂಸಿ ಮುಖಂಡರು ರಾಹುಲ್‌ ಗಾಂಧಿ ಮತ್ತು ಇತರ ಮುಖಂಡರಿಗೆ ತಿಳಿಸಿದ್ದರು.

              'ಲೋಕಸಭೆಯ ಕಲಾಪಗಳು ಆರಂಭವಾಗುವುದಕ್ಕೂ ಅರ್ಧ ಗಂಟೆ ಮೊದಲು ಟಿಎಂಸಿ ತನ್ನ ಅಭಿಪ್ರಾಯ ತಿಳಿಸಿತು. ಬಳಿಕ ರಾಹುಲ್‌ ಗಾಂಧಿ ಅವರು ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ಮತ್ತು ಡಿಎಂಕೆಯ ಟಿ.ಆರ್.ಬಾಲು ಅವರೊಂದಿಗೆ ಚರ್ಚಿಸಿದರು. ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯ ಇದೆ ಎಂಬಂತಹ ಸನ್ನಿವೇಶವನ್ನು ಸೃಷ್ಟಿಸುವುದು ಬೇಡ ಎಂಬ ತೀರ್ಮಾನಕ್ಕೆ ಅವರು ಬಂದರು' ಎಂದು ಮೂಲಗಳು ಹೇಳಿವೆ.

          'ವಿರೋಧ ಪಕ್ಷಗಳೆಲ್ಲವೂ ಎಲ್ಲರೂ ಒಟ್ಟಾಗಿ ಇರುವುದನ್ನು ರಾಹುಲ್‌ ಗಾಂಧಿ ಬಯಸಿದ್ದರು. ಭಿನ್ನ ಅಭಿಪ್ರಾಯ ಬಂದಿದ್ದರಿಂದ ಧ್ವನಿ ಮತಕ್ಕೆ ಒತ್ತಾಯ ಮಾಡದಂತೆ ಪಕ್ಷದ ಸಂಸದರಿಗೆ ಅವರು ಸೂಚಿಸಿದರು' ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

          'ಧ್ವನಿ ಮತಕ್ಕೆ ಹಾಕಲಾಗಿತ್ತು. ಆ ಬಳಿಕ 'ಇಂಡಿಯಾ' ಕೂಟದ ಪಕ್ಷಗಳು ಮತ ವಿಭಜನೆಗೆ ಬೇಡಿಕೆ ಇಡಬಹುದಿತ್ತು. ವಿರೋಧಪಕ್ಷಗಳ ನಡುವೆ ಒಮ್ಮತ ಮತ್ತು ಸಹಕಾರ ಇರಬೇಕು ಎಂಬ ಆಶಯದಿಂದ ಸದಸ್ಯರು ಧ್ವನಿಮತಕ್ಕೆ ಒತ್ತಾಯ ಮಾಡಲಿಲ್ಲ' ಎಂದು ರಾಜ್ಯಸಭೆಯ ಕಾಂಗ್ರೆಸ್‌ನ ಮುಖ್ಯ ಸಚೇತಕ ಜೈರಾಮ್‌ ರಮೇಶ್‌ ಹೇಳಿದರು.

              ವಿರೋಧ ಪಕ್ಷಗಳಿಗೆ ಡೆಪ್ಯುಟಿ ಸ್ಪೀಕರ್‌ ಹುದ್ದೆ ನೀಡಲು ಸರ್ಕಾರ ಒಪ್ಪದೇ ಇದ್ದುದರಿಂದ ಕೋಡಿಕುನ್ನಿಲ್‌ ಸುರೇಶ್‌ ಅವರನ್ನು ಕಣಕ್ಕಿಳಿಸಲು ಇಂಡಿಯಾ ಕೂಟ ತೀರ್ಮಾನಿಸಿತ್ತು.

'ಇಂಡಿಯಾ' ಕೂಟದ ಅಭ್ಯರ್ಥಿಯಾಗಿ ಸುರೇಶ್‌ ಅವರನ್ನು ಆಯ್ಕೆ ಮಾಡುವಾಗ ಕಾಂಗ್ರೆಸ್‌ ತನ್ನೊಂದಿಗೆ ಸಮರ್ಪಕ ಚರ್ಚೆ ನಡೆಸಿಲ್ಲ ಎಂದು ಟಿಎಂಸಿ ಈ ಮೊದಲು ಅಸಮಾಧಾನ ವ್ಯಕ್ತಪಡಿಸಿತ್ತು.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries