HEALTH TIPS

ವಿಐಎಸ್‌ಎಲ್‌ ಪುನರುಜ್ಜೀವನ: ಸಮಗ್ರ ಮಾಹಿತಿಗೆ ಎಚ್‌ಡಿಕೆ ಸೂಚನೆ

         ವದೆಹಲಿ: ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು (ವಿಐಎಸ್‌ಎಲ್) ಪುನರುಜ್ಜೀವನಗೊಳಿಸಲು ಇರುವ ಸಾಧ್ಯಾಸಾಧ್ಯತೆಗಳು, ಅವಕಾಶಗಳ ಬಗ್ಗೆ ಶೀಘ್ರವೇ ಸಮಗ್ರ ಮಾಹಿತಿ ಕೊಡುವಂತೆ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
            ಉಕ್ಕು ಸಚಿವಾಲಯದ ಉನ್ನತ ಅಧಿಕಾರಿಗಳೊಂದಿಗೆ ಕುಮಾರಸ್ವಾಮಿ ಮಂಗಳವಾರ ಇಲ್ಲಿ ಸಭೆ ನಡೆಸಿದರು. ಬಳಿಕ ಉಕ್ಕು ಹಾಗೂ ಬೃಹತ್‌ ಕೈಗಾರಿಕಾ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಕಾರ್ಖಾನೆಯ ಪುನಶ್ಚೇತನದ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
           ಈ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಲು ಕೇಂದ್ರ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಈ ಎಲ್ಲ ಕ್ರಮಗಳು ವಿಫಲಗೊಂಡ ಕಾರಣ ಕಾರ್ಖಾನೆಯನ್ನು ಮುಚ್ಚಲು ತೀರ್ಮಾನಿಸಲಾಗಿದೆ' ಎಂದು ಕೇಂದ್ರ ಸರ್ಕಾರ ಈ ಹಿಂದೆ ತಿಳಿಸಿತ್ತು.
               ಸಂಸ್ಥೆಯನ್ನು ಖಾಸಗೀಕರಣ ಮಾಡಲು ಕೇಂದ್ರ ಸಚಿವ ಸಂಪುಟವು 2016ರಲ್ಲಿ ಒಪ್ಪಿಗೆ ನೀಡಿತ್ತು. ಸಂಸ್ಥೆಯನ್ನು ಸಂಪೂರ್ಣವಾಗಿ ಮಾರಾಟ ಮಾಡಲು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯು (ಡಿಐಪಿಎಎಂ) ಈ ಹಿಂದೆ ಬಿಡ್‌ ಕರೆದಿತ್ತು. ಬಿಡ್‌ದಾರರು ಆಸಕ್ತಿ ವಹಿಸದ ಕಾರಣಕ್ಕೆ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ 2022ರ ನವೆಂಬರ್‌ನಲ್ಲಿ ಕೈ ಬಿಟ್ಟಿತ್ತು. ನಂತರ ಸರ್ಕಾರವು ಕಾರ್ಖಾನೆಯನ್ನು ಮುಚ್ಚುವ ಪ್ರಕ್ರಿಯೆ ಆರಂಭಿಸಿತ್ತು' ಎಂದು ಕೇಂದ್ರ ತಿಳಿಸಿತ್ತು.
             'ಪುನರುಜ್ಜೀವನದ ಭಾಗವಾಗಿ ಈ ಕಾರ್ಖಾನೆಗೆ ಬಳ್ಳಾರಿ ಜಿಲ್ಲೆಯಲ್ಲಿ 140 ಹೆಕ್ಟೇರ್‌ ಕಬ್ಬಿಣದ ಅದಿರು ಗಣಿಗಾರಿಕೆ ನೀಡಲು ಪ್ರಯತ್ನಿಸಲಾಗಿತ್ತು. ಆದರೆ, ದಾವೆಯ ಹಂತಕ್ಕೆ ಹೋಗಿದ್ದರಿಂದ ಇದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿರಲಿಲ್ಲ. ಈ ವಿಚಾರ ಇಂದಿಗೂ ಇತ್ಯರ್ಥ ಆಗಿಲ್ಲ' ಎಂದು ಕೇಂದ್ರ ಅಸಹಾಯಕತೆ ವ್ಯಕ್ತಪಡಿಸಿತ್ತು. ಕಾರ್ಖಾನೆ ಪುನರುಜ್ಜೀವನಗೊಳಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಸರ್ಕಾರವು ಇತ್ತೀಚೆಗೆ ಪತ್ರ ಬರೆದಿತ್ತು.
          ಸಭೆಯಲ್ಲಿ ಮಾತನಾಡಿದ ಅಧಿಕಾರಿಗಳು, ಬೆಂಗಳೂರಿನಲ್ಲಿ ಉಕ್ಕು ಸಂಶೋಧನಾ ಕೇಂದ್ರ ಸ್ಥಾಪನೆ ಬಗ್ಗೆ ಸಚಿವರ ಗಮನ ಸೆಳೆದರು. ಉಕ್ಕು ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟರೆ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ ಎಂದೂ ಚರ್ಚೆ ನಡೆಯಿತು.
ಬೃಹತ್ ಕೈಗಾರಿಕೆ ಖಾತೆಯನ್ನು ತಮಗೇ ಕೊಟ್ಟಿರುವ ಕಾರಣ ಉಕ್ಕು ಖಾತೆಗೆ ಹೆಚ್ಚು ಸಹಾಯ ಆಗುತ್ತಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
         'ಅವಕಾಶ ಇರುವ ಕೈಗಾರಿಕೆಗಳನ್ನು ಪುನಃಶ್ಚೇತನ ಮಾಡೋಣ. ಸುಖಾಸುಮ್ಮನೆ ಜನರ ತೆರಿಗೆ ಹಣ ಪೋಲು ಮಾಡುವುದು ಬೇಡ' ಎಂದು ಕುಮಾರಸ್ವಾಮಿ ಹೇಳಿದರು.
ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅಮರೀಂದು ಪ್ರಕಾಶ್‌ ಹಾಗೂ ಅಧಿಕಾರಿಗಳು ಸಚಿವರನ್ನು ಭೇಟಿ ಮಾಡಿ ಚರ್ಚಿಸಿದರು. ಈ ಸಂದರ್ಭದಲ್ಲಿ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪುನಶ್ಚೇತನದ ಬಗ್ಗೆಯೂ ಸಚಿವರು ಸಮಾಲೋಚಿಸಿದರು.
ಕುಮಾರಸ್ವಾಮಿಗೆ ಜೈರಾಮ್‌ ಪಂಚ ಪ್ರಶ್ನೆ
           ಕುಮಾರಸ್ವಾಮಿ ಅವರು ತುಕ್ಕು ಹಿಡಿದಿರುವ ಉಕ್ಕಿನ ಖಾತೆಗೆ ಸಚಿವರಾಗಿದ್ದಾರೆ. ಅವರು ಪಂಚ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಆಗ್ರಹಿಸಿದ್ದಾರೆ.
*ವಿಶಾಖಪಟ್ಟಣದ ಉಕ್ಕಿನ ಕಾರ್ಖಾನೆಯನ್ನು (ಆರ್‌ಐಎನ್‌ಎಲ್) ಪ್ರಧಾನಿಯವರ ಸ್ನೇಹಿತರಿಗೆ ಮಾರುವುದಿಲ್ಲ ಎಂದು ಕುಮಾರಸ್ವಾಮಿಯವರು ಲಿಖಿತ ಭರವಸೆ ನೀಡಬಲ್ಲರೇ?
*ಸೇಲಂನ ಉಕ್ಕಿನ ಕಾರ್ಖಾನೆಯ ಖಾಸಗೀಕರಣ ಪ್ರಕ್ರಿಯೆಯನ್ನು ನೂತನ ಸಚಿವರು ಮುಂದುವರಿಸುತ್ತಾರೆಯೇ?
*ಬಸ್ತಾರ್‌ನ ನಗರ್ನಾರ್ ಉಕ್ಕಿನ ಕಾರ್ಖಾನೆಯನ್ನು ಖಾಸಗೀಕರಣ ಮಾಡುವುದಿಲ್ಲ ಎಂದು ಕೇಂದ್ರ ಸಚಿವ ಅಮಿತ್ ಶಾ ಈ ಹಿಂದೆ ಮಾತು ಕೊಟ್ಟಿದ್ದರು. ಶಾ ಮಾತಿಗೆ ಕುಮಾರಸ್ವಾಮಿ ಬದ್ಧರಾಗಿರುತ್ತಾರೆಯೇ ಅಥವಾ ಪ್ರಧಾನಿಯವರ ಉದ್ಯಮ ಸ್ನೇಹಿತರಿಗೆ ಈ ಕಾರ್ಖಾನೆಯನ್ನು ಮಾರಾಟ ಮಾಡುತ್ತಾರೆಯೇ?
*ವಿಐಎಸ್‌ಎಲ್‌ ಕಾರ್ಖಾನೆ ಮುಚ್ಚುವ ನಿರ್ಧಾರ ಕೈಬಿಟ್ಟು ಅದರ ಉಳಿವಿಗೆ ಅಗತ್ಯ ಕ್ರಮ ಕೈಗೊಳ್ಳುವರೇ?

*ದುರ್ಗಾಪುರದ ಉಕ್ಕಿನ ಕಾರ್ಖಾನೆಯನ್ನು ಮಾರಲು ಮೋದಿ ಸರ್ಕಾರ ಪ್ರಯತ್ನಿಸಿತ್ತು. ಈ ಕಾರ್ಖಾನೆಯ ಖಾಸಗೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಅಲ್ಲಿನ ಹಾಗೂ ಪಶ್ಚಿಮ ಬಂಗಾಳದ ಜನರಿಗೆ ಸಚಿವರು ಭರವಸೆ ನೀಡಬಲ್ಲರೇ?

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries