ಮುಂಬೈ: ಲೋಕಸಭಾ ಚುನಾವಣೆಯಲ್ಲಿ ಎದುರಾದ ಹಿನ್ನಡೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಬಿಜೆಪಿ, ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 'ಮ್ಯಾರಥಾನ್' ಸಭೆ ನಡೆಸಿದೆ.
ವಿಧಾನಸಭಾ ಚುನಾವಣೆಯು ಅಕ್ಟೋಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ.
ಮಹಾರಾಷ್ಟ್ರದಲ್ಲಿ ಒಟ್ಟು 48 ಲೋಕಸಭಾ ಕ್ಷೇತ್ರಗಳಿವೆ. ಇತ್ತೀಚೆಗೆ ಮುಕ್ತಾಯವಾದ ಚುನಾವಣೆಯಲ್ಲಿ, ಆಡಳಿತಾರೂಢ 'ಮಹಾಯುತಿ' (ಬಿಜೆಪಿ, ಶಿವಸೇನಾ, ಎನ್‌ಸಿಪಿ) ಮೈತ್ರಿಕೂಟ 17 ಸ್ಥಾನಗಳನ್ನಷ್ಟೇ ಗೆದ್ದಿದೆ. 2019 ಲೋಕಸಭೆ ಚುನಾವಣೆಯಲ್ಲಿ 23 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿ 9 ಸ್ಥಾನಗಳಿಗೆ ಕುಸಿದಿದೆ. ಇದೇ ವೇಳೆ, ಶಿವಸೇನಾ (ಯುಬಿಟಿ), ಎನ್‌ಸಿಪಿ-ಎಸ್‌ಪಿ ಹಾಗೂ ಕಾಂಗ್ರೆಸ್ ಪಕ್ಷಗಳನ್ನೊಳಗೊಂಡ 'ಮಹಾ ವಿಕಾಸ ಆಘಾಡಿ' (ಎಂವಿಎ) ಮೈತ್ರಿಕೂಟ 30 ಸ್ಥಾನಗಳನ್ನು ಗೆದ್ದುಕೊಂಡಿದೆ. ಇದು ಬಿಜೆಪಿಯನ್ನು ಚಿಂತೆಗೆ ದೂಡಿದೆ.
ಬಿಜೆಪಿ ಮೂಲಗಳ ಪ್ರಕಾರ, ಪಕ್ಷದ ಆಂತರಿಕ ಸಭೆಯಲ್ಲಿ ವಿಧಾನಸಭಾ ಚುನಾವಣೆ ಸಂಬಂಧ ಪ್ರಾಥಮಿಕವಾಗಿ ನೀಲಿನಕ್ಷೆ ತಯಾರಿಸಲಾಗಿದೆ. ಮಿತ್ರ ಪಕ್ಷಗಳೊಂದಿಗೆ ಸೀಟು ಹಂಚಿಕೆ ಬಗ್ಗೆ ಮುಂದಿನ ಹಂತದಲ್ಲಿ ಚರ್ಚಿಸಲಾಗುವುದು. ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ, ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ್ ಬವಾಂಕುಲೆ ಅವರು ಹಾಜರಾಗಿದ್ದರು ಎನ್ನಲಾಗಿದೆ.
288 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಹೊಂದಿದೆ. 2019ರಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿದ್ದ ಹಾಗೂ ಸದ್ಯ ಇಬ್ಭಾಗವಾಗಿರುವ ಶಿವಸೇನಾ 56 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಇದೀಗ ಶೀವಸೇನಾ ಪಕ್ಷ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಉದ್ಧವ್ ಠಾಕ್ರೆ ಬಣಗಳಾಗಿ ಬೇರ್ಪಟ್ಟಿದೆ.