ಲಖನೌ: ನಗರದ ಈಸ್ಟರ್ನ್ ಬುಕ್ ಕಂಪನಿ ಪ್ರಕಟಿಸಿರುವ ಸಂವಿಧಾನದ ಪುಟ್ಟ ಪ್ರತಿ (ಪಾಕೆಟ್ ಆವೃತ್ತಿ) ಕುರಿತು ಜನರು ಹೆಚ್ಚು ಒಲವು ತೋರಿಸುತ್ತಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಲವು ಬಾರಿ ಲೋಕಸಭೆ ಕಲಾಪ ಹಾಗೂ ಚುನಾವಣಾ ಪ್ರಚಾರದ ವೇಳೆ ಈ ಪುಸ್ತಕವನ್ನು ಪ್ರದರ್ಶಿಸಿದ ನಂತರ, ಜನರು ಈ ಪುಟ್ಟ ಹೊತ್ತಗೆಯತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎಂದು ಕಂಪನಿ ಹೇಳಿದೆ.
20 ಸೆಂ.ಮೀ.ನಷ್ಟು ಉದ್ದ ಹಾಗೂ 9 ಸೆಂ.ಮೀ.ನಷ್ಟು ಅಗಲ ಇರುವ, ಸಂವಿಧಾನದ ಈ ಪ್ರತಿಯನ್ನು ಕಂಪನಿ 2009ರಲ್ಲಿ ಮೊದಲ ಬಾರಿಗೆ ಪ್ರಕಟಿಸಿತ್ತು.
'ಸುಪ್ರೀಂ ಕೋರ್ಟ್ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ಸಂವಿಧಾನದ ಪಾಕೆಟ್ ಆವೃತ್ತಿ ಮುದ್ರಿಸುವ ಕುರಿತು ಸಲಹೆ ನೀಡಿದ್ದರು. ವಕೀಲರು ನ್ಯಾಯಾಲಯಗಳಲ್ಲಿ ಧರಿಸುವ ನಿಲುವಂಗಿಯ ಕಿಸೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವ ಗಾತ್ರದ್ದಿರಬೇಕು ಎಂದೂ ಅವರು ಹೇಳಿದ್ದರು' ಎಂದು ಈಸ್ಟರ್ನ್ ಬುಕ್ ಕಂಪನಿಯ ನಿರ್ದೇಶಕರಲ್ಲೊಬ್ಬರಾದ ಸುಮೀತ್ ಮಲಿಕ್ ಹೇಳಿದರು.
'2009ರಲ್ಲಿ ಮೊದಲು ಮುದ್ರಿತಗೊಂಡ ಈ ಪುಟ್ಟ ಪ್ರತಿ, ಈ ವರೆಗೆ 16 ಬಾರಿ ಮರುಮುದ್ರಣ ಕಂಡಿದೆ. ಹಲವು ವಕೀಲರು ಹಾಗೂ ನ್ಯಾಯಾಧೀಶರು ಇದರ ಪ್ರತಿಗಳನ್ನು ಖರೀದಿಸಿದ್ದಾರೆ. ರಾಮನಾಥ ಕೋವಿಂದ್ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನದ ಈ ಪಾಕೆಟ್ ಪ್ರತಿಯನ್ನೇ ಅವರಿಗೆ ನೀಡಿದ್ದರು' ಎಂದು ಹೇಳಿದರು.
'ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ವಿದೇಶ ಪ್ರವಾಸ ಕೈಗೊಂಡ ಸಂದರ್ಭದಲ್ಲಿ, ಆಯಾ ದೇಶಗಳ ನ್ಯಾಯಮೂರ್ತಿಗಳಿಗೆ ಉಡುಗೊರೆಯಾಗಿ ನೀಡುವುದಕ್ಕಾಗಿ ಈ ಪ್ರತಿಗಳನ್ನು ತಮ್ಮೊಂದಿಗೆ ಒಯ್ಯುತ್ತಾರೆ' ಎಂದೂ ಮಲಿಕ್ ಹೇಳಿದರು.
'ಚುನಾವಣಾ ರ‍್ಯಾಲಿಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂವಿಧಾನದ ಈ ಪಾಕೆಟ್ ಪ್ರತಿಯನ್ನು ತೋರಿಸುತ್ತಿದ್ದರು. ಇದರಿಂದ ಜನರು ಸಹಜವಾಗಿಯೇ ಆಕರ್ಷಿತರಾಗಿದ್ದು, ಖರೀದಿಗೆ ಒಲವು ತೋರುತ್ತಿದ್ದಾರೆ. ಹೀಗಾಗಿ ಹೆಚ್ಚು ಪ್ರತಿಗಳಿಗೆ ಬೇಡಿಕೆ ಬರುತ್ತಿದೆ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.