ಕಣ್ಣೂರು: ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ಶ್ರೀ ರಾಜರಾಜೇಶ್ವರ ದೇವಸ್ಥಾನದೊಂದಿಗೆ ನಿಕಟ ಸಂಪರ್ಕ ಹೊಂದಿರುವವರಲ್ಲಿ ಕರ್ನಾಟಕದ ಅನೇಕ ರಾಜಕೀಯ ಮುಖಂಡರಿದ್ದಾರೆ. ತಮಗೆ ರಾಜಕೀಯ ಸಂದಿಗ್ಧಾವಸ್ಥೆ ಎದುರಾದಾಗಲೆಲ್ಲಾ ಈ ಮುಖಂಡರು ತಳಿಪರಂಬ ಶ್ರೀ ರಾಜರಾಜೇಶ್ವರ ದೇವರನ್ನು ಬಂದು ಪ್ರಾರ್ಥಿಸುವುದು ನಡೆದುಬರುತ್ತಿದೆ.
ಪ್ರಸಕ್ತ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗುರಿಯಾಗಿಸಿ ಕೇರಳದ ದೇಗುಲವೊಂದರಲ್ಲಿ ಪ್ರಾಣಿ ಬಲಿಯೊಂದಿಗೆ ಶತ್ರು ಭೈರವಿ ಪೂಜೆ ನಡೆಸಿರುವುದಾಗಿ ವ್ಯಾಪಕ ಪ್ರಚಾರ ನಡೆಯುತ್ತಿರುವ ಮಧ್ಯೆ, ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರ ಹೆಸರಲ್ಲಿ ಹರಕೆ ರೂಪದಲ್ಲಿ ತಳಿಪರಂಬದ ಶ್ರೀ ರಾಜರಾಜೇಶ್ವರ ದೇವಸ್ಥಾನಕ್ಕೆ ಚಿನ್ನದ ಕೊಡ ಸಮರ್ಪಿಸಿರುವ ವಿಚಾರ ವ್ಯಾಪಕ ಪ್ರಚಾರ ಪಡೆದುಕೊಂಡಿದೆ. ಮುಖ್ಯ ಮಂತ್ರಿ ಆಪ್ತರೊಬ್ಬರು ದೇವಾಲಯಕ್ಕೆ ಆಗಮಿಸಿ ಚಿನ್ನದ ಕೊಡ ಹರಿಕೆಯಾಗಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.
ತಳಿಪರಂಬ ಶ್ರೀ ರಾಜರಾಜೇಶ್ವರ ದೇವಸ್ಥಾನದಲ್ಲಿ ಚಿನ್ನದ ಕೊಡ ಹರಿಕೆ ಎಂಬುದು 1600ರೂ. ಮೊತ್ತದ ಒಂದು ಸಾಮಾನ್ಯ ಹರಿಕೆಯಾಗಿದ್ದು, ಹಲವು ಭಕ್ತಾದಿಗಳು ಇದನ್ನು ಸಲ್ಲಿಸುತ್ತಿದ್ದಾರೆ. ಕೆಲವು ದಿವಸಗಳ ಹಿಂದೆ ಕರ್ನಾಟಕ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರ ಆಪ್ತನೆಂದು ತಿಳಿಸಿ ವ್ಯಕ್ತಿಯೊಬ್ಬರು ಈ ಹರಿಕೆ ಸಲ್ಲಿಸಿದ್ದಾರೆ. ಹೊರತು ಚಿನ್ನದ ಕೊಡ ಹರಿಕೆಯಾಗಿ ಸಲ್ಲಿಸಿಲ್ಲ ಎಂಬುದಾಗಿ ದೇವಾಲಯದ ಕಚೇರಿ ಸಿಬ್ಬಂದಿ ತಿಳಿಸಿದ್ದಾರೆ.