ಹಾನಿಕಾರಕ ಪದಾರ್ಥಗಳನ್ನು ಒಳಗೊಂಡಿರುವ ನಕಲಿ ಅಡುಗೆ ಎಣ್ಣೆಗಳ ಬಳಕೆಯು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇತ್ತೀಚೆಗೆ ರಾಜಸ್ಥಾನದ ಅಜ್ಮೀರ್‌ನಲ್ಲಿ ಫುಡ್ ಸೇಫ್ಟಿ ಮತ್ತು ಸ್ಟಾಂಡರ್ಡೈಸೇಶನ್ ಸೊಸೈಟಿ ಆಫ್ ಇಂಡಿಯಾ (ಎಫ್‌ಎಸ್‌ಎಸ್‌ಎಐ) 18,000 ಲೀಟರ್ ನಕಲಿ ಅಡುಗೆ ಎಣ್ಣೆಯನ್ನು ವಶಪಡಿಸಿಕೊಂಡಾಗ ಅಪಾಯಕಾರಿ ಮಾಹಿತಿಯೊಂದು ಹೊರಬಂದಿದೆ.
ಎಫ್‌ಎಸ್‌ಎಸ್‌ಎಐ ಇತ್ತೀಚಿನ ಟ್ವೀಟ್‌ನ ಪ್ರಕಾರ, "ವಶ ಪಡಿಸಿಕೊಂಡ ನಕಲಿ ಎಣ್ಣೆಯಲ್ಲಿ ಕಲಬೆರಕೆಯೊಂದಿಗೆ ವಿವಿಧ ಜನಪ್ರಿಯ ಬ್ರಾಂಡ್‌ಗಳ ಕವರ್‌ಗಳನ್ನು ಬಳಸಿ ಅಡುಗೆ ಎಣ್ಣೆಯನ್ನು ಮಾರಾಟ ಮಾಡಲಾಗಿದೆ" ಅಲ್ಲದೆ ಈ ಪೋಸ್ಟ್ ನಲ್ಲಿ ಅಡುಗೆ ಎಣ್ಣೆಗಳಿಗೆ ಸೇರಿಸಲಾದ ಕೆಲವು ಪದಾರ್ಥಗಳನ್ನು ಪಟ್ಟಿ ಮಾಡಲಾಗಿದೆ. ಇವು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿವೆ ಎಂದು ತಿಳಿದು ಬಂದಿದೆ. ಹಾಗಾದರೆ ಪಟ್ಟಿಯಲ್ಲಿರುವ ಕಲಬೆರೆಕೆ ಪದಾರ್ಥಗಳು ಯಾವವು ಎಂದು ತಿಳಿಯೋಣ.
ಖನಿಜ ತೈಲ
ಆಹಾರ ಉತ್ಪನ್ನಗಳಿಗೆ ಖನಿಜ ತೈಲವನ್ನು ಸೇರಿಸುವುದು ಆಹಾರ ಸುರಕ್ಷತೆ ಮಾನದಂಡಗಳ ಉಲ್ಲಂಘನೆಯಾಗಿದೆ. ಎಣ್ಣೆಯ ಪ್ರಮಾಣವನ್ನು ಹೆಚ್ಚಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಕೆಲವೊಮ್ಮೆ ಖನಿಜ ತೈಲವನ್ನು ಅಡುಗೆ ಎಣ್ಣೆಗೆ ಸೇರಿಸಲಾಗುತ್ತದೆ.
ಇದರ ಸೇವನೆಯು ಜಠರ ಸಮಸ್ಯೆಗಳು, ಯಕೃತ್ತಿನ ಹಾನಿ ಮತ್ತು ದೀರ್ಘಕಾಲದ ಕ್ಯಾನ್ಸರ್ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹೀಗಾಗಿ ಇದು ನಮಗೇ ತಿಳಿಯದಂತೆ ದೇಹದಲ್ಲಿ ನಾನಾ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.
ಆರ್ಗೆಮೋನ್ ಎಣ್ಣೆ
ಆರ್ಗೆಮೋನ್ ಎಣ್ಣೆಯನ್ನು ಎಣ್ಣೆಯ ಪ್ರಮಾಣವನ್ನು ಹೆಚ್ಚಿಸಲು ಬಳಸಲಾಗುತ್ತದೆ. ಈ ನಕಲಿ ಎಣ್ಣೆ ಅಡುಗೆ ಎಣ್ಣೆಯಲ್ಲಿ ಕಂಡುಬರುವ ಮತ್ತೊಂದು ಅಪಾಯಕಾರಿ ಎಣ್ಣೆಯಾಗಿದೆ. ಆರ್ಗೆಮೋನ್ ಮೆಕ್ಸಿಕಾನಾ ಸಸ್ಯದ ಬೀಜಗಳಿಂದ ಹೊರತೆಗೆಯಲಾಗುತ್ತದೆ. ಈ ಎಣ್ಣೆ ದೇಹಕ್ಕೆ ವಿಷಕಾರಿಯಾಗಿದೆ.
ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ಹೆಚ್ಚಿಸುತ್ತದೆ. ಅಲ್ಲದೆ ಆರ್ಗೆಮೋನ್ ಎಣ್ಣೆಯ ಸೇವನೆಯು ಗಂಭೀರವಾದ ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆ. ಆಹಾರ ಉತ್ಪನ್ನಗಳಲ್ಲಿ ಈ ಎಣ್ಣೆಯ ಬಳಕೆ ಅತ್ಯಂತ ಅಪಾಯಕಾರಿಯಾಗಿದೆ ಎಂದು ಹೇಳಲಾಗುವುದರಿಂದ ಇದು ದೇಹಕ್ಕೆ ಒಳ್ಳೆಯದಲ್ಲ.
ಹತ್ತಿ ಬೀಜದ ಎಣ್ಣೆ
ಹತ್ತಿಬೀಜದ ಎಣ್ಣೆಯನ್ನು ಆಹಾರ ಉದ್ಯಮದಲ್ಲಿ ಬಳಸಲಾಗಿದ್ದರೂ, ಅದರ ಸಂಸ್ಕರಿಸದ ಎಣ್ಣೆ ವಿಷಕಾರಿಯಾಗಿರುತ್ತದೆ. ಇದು ಸಂತಾನೋತ್ಪತ್ತಿ ಸಮಸ್ಯೆಗಳು ಮತ್ತು ಯಕೃತ್ತಿನ ಹಾನಿಗೆ ಕಾರಣವಾಗಬಹುದು.
ಖಾದ್ಯ ತೈಲಗಳೊಂದಿಗೆ ಸಂಸ್ಕರಿಸದ ಹತ್ತಿಬೀಜದ ಎಣ್ಣೆಯನ್ನು ಮಿಶ್ರಣ ಮಾಡುವ ಮೂಲಕ ತಯಾರಕರು ವೆಚ್ಚವನ್ನು ಕಡಿಮೆ ಮಾಡಬಹುದು. ಆದರೆ ಇಂತಹ ಎಣ್ಣೆ ಬಳಕೆ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಈ ಎಣ್ಣೆಯನ್ನು ಹೊಂದಿರುವ ಆಹಾರವನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಅಪಾಯಗಳು ಎದುರಸಬೇಕಾಗುತ್ತದೆ.
ಹರಳೆಣ್ಣೆ
ಕ್ಯಾಸ್ಟರ್ ಆಯಿಲ್ ಅನ್ನು ಪ್ರಾಥಮಿಕವಾಗಿ ಕೈಗಾರಿಕಾ ಮತ್ತು ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಕೆಲವೊಮ್ಮೆ ಇದನ್ನು ಅಡುಗೆ ಎಣ್ಣೆಯೊಂದಿಗೆ ಸೇರಿಸಲಾಗುತ್ತದೆ.
ಕ್ಯಾಸ್ಟರ್ ಆಯಿಲ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಗಂಭೀರ ಜಠರ ಸಮಸ್ಯೆಗಳನ್ನು ಇದು ಉಂಟುಮಾಡಬಹುದು. ಹೀಗಾಗಿ ಆಹಾರ ಉತ್ಪನ್ನಗಳಲ್ಲಿ ಕ್ಯಾಸ್ಟರ್ ಆಯಿಲ್ ಅನ್ನು ಬಳಸುವುದು ಸೂಕ್ತವಲ್ಲ. ಇದು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಅಗ್ಗದ ತರಕಾರಿ ತೈಲಗಳು
ಪಾಮ್ ಎಣ್ಣೆ ಅಥವಾ ಸೋಯಾಬೀನ್ ಎಣ್ಣೆಯಂತಹ ಅಗ್ಗದ ಎಣ್ಣೆಗಳನ್ನು ಹೆಚ್ಚಾಗಿ ಉತ್ತಮ ಗುಣಮಟ್ಟದ ಎಣ್ಣೆಗಳೊಂದಿಗೆ ಬೆರೆಸಲಾಗುತ್ತದೆ. ಬಳಿಕ ಅದನ್ನು ಶುದ್ಧ ತೈಲವಾಗಿ ಮಾರಾಟ ಮಾಡಲಾಗುತ್ತದೆ.
ಈ ತೈಲಗಳು ಅಂತರ್ಗತವಾಗಿ ವಿಷಕಾರಿಯಲ್ಲದಿದ್ದರೂ, ಈ ತೈಲ ಕಡಿಮೆ ಪೌಷ್ಟಿಕಾಂಶವನ್ನು ಹೊಂದಿರುತ್ತದೆ. ಕೊಬ್ಬಿನಾಂಶವಿರುವ ಕಲಬೆರಕೆಯ ಈ ಎಣ್ಣೆಯನ್ನು ಅತಿಯಾದ ಸೇವನೆಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಪ್ರಾಣಕ್ಕೆ ಕುತ್ತು ಉಂಟು ಮಾಡಬಹುದು.
ಕೃತಕ ಬಣ್ಣಗಳು ಮತ್ತು ಸುವಾಸನೆ
ಕಲಬೆರಕೆಯನ್ನು ಮರೆಮಾಡಲು ಮತ್ತು ನಕಲಿ ತೈಲಗಳನ್ನು ಅಸಲಿಯಾಗಿ ಕಾಣುವಂತೆ ಮಾಡಲು, ತಯಾರಕರು ಸಾಮಾನ್ಯವಾಗಿ ಕೃತಕ ಬಣ್ಣಗಳು ಮತ್ತು ಸುವಾಸನೆಗಳನ್ನು ಸೇರಿಸುತ್ತಾರೆ.
ಈ ರಾಸಾಯನಿಕಗಳು ಅಲರ್ಜಿ, ಜೀರ್ಣಕಾರಿ ಸಮಸ್ಯೆಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಕೆಲವು ಕೃತಕ ಬಣ್ಣಗಳ ದೀರ್ಘಾವಧಿಯ ಸೇವನೆಯು ಕ್ಯಾನ್ಸರ್ ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳನ್ನು ಒಳಗೊಂಡಂತೆ ಹೆಚ್ಚು ಗಂಭೀರ ಪರಿಸ್ಥಿತಿಗಳಿಗೆ ಕಾರಣವಾಗಬಹುದು.