ನವದೆಹಲಿ: ಲೋಕೊ ಪೈಲಟ್‌ಗಳು ವೇಗ ಮಿತಿಯನ್ನು ಏಕೆ ಉಲ್ಲಂಘಿಸುತ್ತಾರೆ? ಎಂಬ ಕುರಿತು ಸತ್ಯ ಸಂಗತಿಗಳನ್ನು ಕಂಡುಕೊಳ್ಳಲು ರೈಲ್ವೆ ಮಂಡಳಿ ಸಮಿತಿಯೊಂದನ್ನು ರಚಿಸಿದೆ.
ಈ ಸಮಿತಿಯೂ ವಿಸ್ತ್ರೃತ ಅಧ್ಯಯನವನ್ನು ಆರಂಭಿಸಿದ್ದು ಜೂನ್ 5 ರಂದು ಮೊದಲ ಸಭೆ ನಡೆಸಿದೆ.
ಇತ್ತೀಚೆಗೆ ಲೋಕೊ ಪೈಲಟ್‌ಗಳು ವೇಗ ಮಿತಿಯನ್ನು ಉಲ್ಲಂಘನೆ ಮಾಡುತ್ತಿರುವುದು ಕಂಡು ಬರುತ್ತಿದೆ.
ಈ ಕುರಿತು ರೈಲ್ವೆ ಮಂಡಳಿ ಎಲ್ಲ ರೈಲ್ವೆ ವಲಯಗಳಿಗೆ ಸುತ್ತೋಲೆ ಕಳಿಸಿದ್ದು ಲೋಕೊ ಪೈಲಟ್‌ಗಳು, ಸಹಾಯಕ ಲೋಕೊ ಪೈಲಟ್‌ಗಳು ಆನ್‌ಲೈನ್‌ನಲ್ಲಿ ನಡೆಯುವ ಸಭೆಗೆ ಹಾಜರಾಗಬೇಕಾಗುತ್ತದೆ ಎಂದು ತಿಳಿಸಿತ್ತು.
ಜೂನ್ 5ರಂದು ನಡೆದಿದ್ದ ಸಭೆಯಲ್ಲಿ 180 ಜನ ಲೋಕೊ ಪೈಲಟ್‌ಗಳು ಭಾಗವಹಿಸಿದ್ದರು. ಈ ವೇಳೆ ಅನೇಕ ಸಲಹೆಗಳನ್ನು ಅವರು ನೀಡಿದ್ದಾರೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೇಗದ ಮಿತಿ ಬಗ್ಗೆ 3 ಕಿ.ಮೀ ಮೊದಲೇ ವಾಕಿಟಾಕಿ ಮೂಲಕ ಮೇಲಿಂದ ಮೇಲೆ ಸಲಹೆ ಸೂಚನೆಗಳು ಲೋಕೊ ಪೈಲಟ್‌ಗಳಿಗೆ ಸಿಗುವಂತಾಗಬೇಕು. ತಾತ್ಕಾಲಿಕ ವೇಗ ಮಿತಿಗಿಂತ ಶಾಶ್ವತ ವೇಗ ಮಿತಿಯನ್ನು (ಪಿಎಸ್‌ಆರ್) ಅಳವಡಿಸಿಕೊಳ್ಳುವುದು ಸೇರಿದಂತೆ ಇತರೆ ಪ್ರಮುಖ ಸಲಹೆಗಳನ್ನು ಲೋಕೊ ಪೈಲಟ್‌ಗಳು ನೀಡಿದ್ದಾರೆ.
ಸಮಿತಿಯ ಅಧ್ಯಯನ ಆರಂಭಿಕ ಹಂತದಲ್ಲಿದ್ದು ಈ ಬಗ್ಗೆ ಇನ್ನೂ ಹೆಚ್ಚಿನ ಸಭೆಗಳನ್ನು ಹಾಗೂ ಕ್ಷೇತ್ರ ಭೇಟಿ ಮಾಡಬೇಕಾಗುತ್ತದೆ. ಸುರಕ್ಷತೆ ಹಾಗೂ ಸುಗಮ ಕಾರ್ಯಾಚರಣೆಗೆ ವೇಗ ಮಿತಿ ಉಲ್ಲಂಘನೆಗಳು ತೊಡಕಾಗಬಾರದು ಎಂದು ಅಧಿಕಾರಿ ತಿಳಿಸಿದ್ದಾರೆ.