ವಯನಾಡ್: ಕೇರಳದ ವಯನಾಡು ಲೋಕಸಭಾ ಕ್ಷೇತ್ರವನ್ನು ತೆರವುಗೊಳಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಿರ್ಧಾರವನ್ನು ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಸೋಮವಾರ ಅಣಕಿಸಿದ್ದಾರೆ. ಕಾಂಗ್ರೆಸ್ ರಾಜ್ಯವನ್ನು ರಾಜಕೀಯ ಎಟಿಎಂ ಆಗಿ ಪರಿಣಮಿಸಿದೆ ಎಂದು ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಪಕ್ಷದ ವರಿಷ್ಠರ ಸಭೆ ನಂತರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಯನಾಡ್ ಲೋಕಸಭಾ ಕ್ಷೇತ್ರವನ್ನು ತೆರವು ಮಾಡಲಿದ್ದಾರೆ ಮತ್ತು ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಏಪ್ರಿಲ್ 26 ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ವಯನಾಡಿನಲ್ಲಿ ರಾಹುಲ್ ವಿರುದ್ಧ ಸೋತಿದ್ದ ಸುರೇಂದ್ರನ್, ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದು, ಶಾಶ್ವತವಾಗಿ ಕಾಣೆಯಾಗಿರುವ ಸಂಸದ" ವಯನಾಡಿನ ಜನರ ನಂಬಿಕೆಗೆ ದ್ರೋಹ ಬಗೆದಿದ್ದಾರೆ ಎಂದು ಬಿಜೆಪಿ ಭವಿಷ್ಯ ನುಡಿದಿತ್ತು ಎಂದು ಹೇಳಿದ್ದಾರೆ.
"ಬಿಜೆಪಿಯ ಭವಿಷ್ಯ ನಿಜವಾಯಿತು: ಶಾಶ್ವತವಾಗಿ ನಾಪತ್ತೆಯಾಗಿರುವ ಸಂಸದರು ತಮ್ಮ ಜನರ ನಂಬಿಕೆಗೆ ದ್ರೋಹ ಬಗೆದು ವಯನಾಡ್ ಕ್ಷೇತ್ರವನ್ನು ಖಾಲಿ ಮಾಡಲು ನಿರ್ಧರಿಸಿದ್ದಾರೆ. ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ತೀವ್ರ ಸಂಕಷ್ಟದಲ್ಲಿದ್ದಾಗ ಮಾತ್ರ ಕೇರಳದ ಕಡೆಗೆ ತಿರುಗುತ್ತಾರೆ, ವಯನಾಡ್ ತನ್ನ ಎರಡನೇ ಮನೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
"ಕೇರಳದ ಪ್ರಾಮಾಣಿಕ ಮತ್ತು ಪ್ರೀತಿಪಾತ್ರ ಜನರು ಶೋಷಣೆಗೆ ಒಳಗಾಗುವುದಕ್ಕಿಂತ ಮತ್ತು ಕೈಬಿಡುವುದಕ್ಕಿಂತ ಹೆಚ್ಚು ಅರ್ಹರು. ಕಾಂಗ್ರೆಸ್‌ಗೆ ಕೇರಳ ರಾಜಕೀಯ ಎಟಿಎಂ.ರಾಹುಲ್ ಕೇರಳಕ್ಕೆ ದ್ರೋಹ ಬಗೆದಿದ್ದಾರೆ ಎಂದು ಸುರೇಂದ್ರನ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರಾಹುಲ್ ವಯನಾಡ್ ಮತ್ತು ರಾಯ್ ಬರೇಲಿ ಕ್ಷೇತ್ರಗಳಲ್ಲಿ ಗೆದ್ದಿದ್ದರು ಮತ್ತು ಜೂನ್ 4 ರಂದು ಹೊರಬಿದ್ದ ಲೋಕಸಭೆಯ ಫಲಿತಾಂಶದ 14 ದಿನಗಳಲ್ಲಿ ಅವರು ಒಂದು ಸ್ಥಾನವನ್ನು ತೆರವು ಮಾಡಬೇಕಾಗಿತ್ತು.