HEALTH TIPS

ಬ್ರಿಟನ್‌ ಸಾರ್ವತ್ರಿಕ ಚುನಾವಣೆಗೆ ವಾರವಷ್ಟೇ ಬಾಕಿ; ಸಾವಿರಾರು ವೈದ್ಯರ ಮುಷ್ಕರ

         ಲಂಡನ್‌: ವೇತನ ತಾರತಮ್ಯ, ಕೆಲಸದ ಸ್ಥಿತಿಗತಿ ಸುಧಾರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಬ್ರಿಟನ್‌ನಲ್ಲಿ ಸಾವಿರಾರು ಕಿರಿಯ ವೈದ್ಯರು ಗುರುವಾರ ಕೆಲಸ ಬಹಿಷ್ಕರಿಸಿ ಮುಷ್ಕರ ಆರಂಭಿಸಿದ್ದಾರೆ.

         ಬ್ರಿಟನ್‌ನಲ್ಲಿ ಜುಲೈ 4ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ವೈದ್ಯರ ಈ ಮುಷ್ಕರ ಮಹತ್ವ ಪಡೆದುಕೊಂಡಿದೆ.

           ಬ್ರಿಟನ್‌ ಸರ್ಕಾರದ ಅನುದಾನದಲ್ಲಿ ನಡೆಯುವ ರಾಷ್ಟ್ರೀಯ ಆರೋಗ್ಯ ಯೋಜನೆ(ಎನ್‌ಎಚ್‌ಎಸ್‌)ನ ಅಡಿಯಲ್ಲಿ ಕೆಲಸ ಮಾಡುವ ಕಿರಿಯ ವೈದ್ಯರು ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಅತ್ಯಂತ ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿದ್ದಾರೆ. ಇದನ್ನು ಖಂಡಿಸಿ, ಐದು ದಿನಗಳ ಕಾಲ ವೈದ್ಯರು ಮುಷ್ಕರ ಆರಂಭಿಸಿದ್ದಾರೆ.

           ಎನ್‌ಎಚ್‌ಎಸ್‌ಗೆ ಒಳಪಟ್ಟ ಆಸ್ಪತ್ರೆ ಹಾಗೂ ಕ್ಲಿನಿಕಲ್‌ಗಳಿಗೆ ಕಿರಿಯ ವೈದ್ಯರೇ ಬೆನ್ನೆಲುಬು. ವೇತನ ವಿಚಾರಕ್ಕೆ ಸಂಬಂಧಿಸಿದಂತೆ 2022ರಿಂದಲೂ ಸರ್ಕಾರದ ಜೊತೆಗೆ ನಿರಂತರ ಸಂಘರ್ಷ ನಡೆಸುತ್ತಿದ್ದಾರೆ. ಇದೇ ಜನವರಿಯಲ್ಲಿ ಆರು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು. ಎನ್‌ಎಚ್‌ಎಸ್‌ನ ಇತಿಹಾಸದಲ್ಲೇ ಅತ್ಯಂತ ದೀರ್ಘಕಾಲದ ಪ್ರತಿಭಟನೆ ಇದಾಗಿದ್ದು, ಪೂರ್ವ ನಿಗದಿಯಾಗಿದ್ದ ಸಾವಿರಾರು ಶಸ್ತ್ರಚಿಕಿತ್ಸೆಗಳನ್ನು ರದ್ದುಗೊಳಿಸಲಾಗಿತ್ತು.

         ಗುರುವಾರದಿಂದಲೇ ಪ್ರತಿಭಟನೆ ಆರಂಭಗೊಂಡಿದ್ದು, ಮಂಗಳವಾರದವರೆಗೆ ನಡೆಯಲಿದೆ. ಬ್ರಿಟನ್‌ನ ಸಂಸತ್‌ನ ಕೆಳಮನೆಯಾದ 'ಹೌಸ್‌ ಆಫ್‌ ಕಾಮನ್ಸ್‌'ಗೆ ಮತದಾನ ನಡೆಯುವ ಎರಡು ದಿನ ಮುಂಚಿತವಾಗಿ ಧರಣಿ ಕೊನೆಗೊಳಿಸುವ ಮೂಲಕ ಜನರ ಮೇಲೂ ಒತ್ತಡತಂತ್ರ ಹೇರಲು ವೈದ್ಯರು ಮುಂದಾಗಿದ್ದಾರೆ.

            ಬ್ರಿಟನ್‌ನ ವೈದ್ಯಕೀಯ ಒಕ್ಕೂಟದ ಪ್ರಕಾರ, 'ಕಳೆದ 15 ವರ್ಷಗಳಲ್ಲಿ ವೇತನದಲ್ಲಿ ಕಾಲುಭಾಗದಷ್ಟು ಇಳಿಕೆ ಕಂಡಿದ್ದು, ಶೇಕಡ 35ರಷ್ಟು ವೇತನ ಏರಿಕೆಗೆ ಬೇಡಿಕೆ ಮುಂದಿಡಲಾಗಿದೆ. ಹೊಸತಾಗಿ ಪರಿಣತ ವೈದ್ಯರು ಪ್ರತಿ ತಾಸಿಗೆ ₹1,583 (15 ಪೌಂಡ್‌) ವೇತನ ಪಡೆಯುತ್ತಿದ್ದು, ಬ್ರಿಟನ್‌ನ ಎನ್‌ಎಚ್‌ಎಸ್‌ನ ಅಡಿಯಲ್ಲಿ ಕನಿಷ್ಠ ವೇತನ ಪ್ರತಿ ತಾಸಿಗೆ ₹1,055 (10 ಪೌಂಡ್‌)ನಷ್ಟಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದೆ.

             ಎನ್‌ಎಚ್‌ಎಸ್‌ನ ಕಿರಿಯ ವೈದ್ಯರ ಒಕ್ಕೂಟದ ಉಪಾಧ್ಯಕ್ಷ ಡಾ. ಸುಮಿ ಮಣಿರಾಜನ್ ಪ್ರಕಾರ, 'ಎನ್‌ಎಚ್‌ಎಸ್‌ಗೆ ಕಡಿಮೆ ಅನುದಾನ ನೀಡುತ್ತಿರುವ ಕಾರಣ, ಕಿರಿಯ ವೈದ್ಯರು ಉತ್ತಮ ವೇತನ ಹುಡುಕಿಕೊಂಡು ಬೇರೆ ದೇಶಗಳಿಗೆ ತೆರಳುತ್ತಿದ್ದಾರೆ. ನಾನು ಲಂಡನ್‌ನಲ್ಲಿ ತರಬೇತಿ ನೀಡಿದ ಹಲವು ವೈದ್ಯರು ನ್ಯೂಜಿಲೆಂಡ್‌ಗೆ ತೆರಳಿದ್ದಾರೆ. ನಾನು ಕೂಡ ಅವರ ರೀತಿ ಏಕೆ ಮಾಡಬಾರದು ಎಂದು ಯೋಚಿಸುತ್ತಿದ್ದೇನೆ' ಎಂದು ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries