ಕಾಸರಗೋಡು : ನಗರದ ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಸಾರ್ವಜನಿಕ ವಾಚನಾಲಯದಲ್ಲಿ ವಾಚನಾ ವಾರಾಚಾರಣೆಗೆ ಬುಧವಾರ ಚಾಲನೆ ನೀಡಲಾಯಿತು.
ನಗರದ ಬಿಇಎಂ ಶಾಲಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಸಹಬಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿಇಎಂ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ರಾಜೇಶ್ ಚಂದ್ರ ಕೆ ಪಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಓದುವಿಕೆ ಬೌದ್ಧಿಕ ವಿಕಾಸಕ್ಕೆ ಹಾದಿಮಾಡಿಕೊಡುತ್ತದೆ. ಪಠ್ಯಪುಸ್ತಕಗಳ ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳ ಬಾಗವಾಗಿ ಗ್ರಂಥಾಲಯ, ಸ್ಮಾರಕ, ಚಾರಿತ್ರಿಕ ಸ್ಥಳ ಸಂದರ್ಶನ, ಸಾಹಿತ್ಯ ಕೂಟ ಮುಂತಾದುವುಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನಕ್ಕೆ ಹಾದಿಮಾಡಿಕೊಡುತ್ತದೆ. ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಲ್ಲಿ ಓದಿನ ಹವ್ಯಾಸ ಬೆಳೆಸುವಲ್ಲಿ ಕನ್ನಡ ಭವನದ ಪಾತ್ರ ಮಹತ್ತರವಾಗಿದೆ. ಇಲ್ಲಿನ ಪ್ರಾಚ್ಯ ವಸ್ತು ಸಂಗ್ರಹ, ಪುರಾತನ ನಾಣ್ಯ ಸಂಗ್ರಹ, ಅಪಾರ ಪುಸ್ತಕ ಸಂಗ್ರಹ ವಿದ್ಯಾರ್ಥಿಗಳಿಗೆ ಸಂದರ್ಶನ ಯೋಗ್ಯ ಕೇಂದ್ರವಾಗಿದೆ ಎಂದು ತಿಳಿಸಿದರು.
ಹೈಸ್ಕೂಲ್ ಅದ್ಯಾಪಿಕೆ ರಕ್ಷಿತಾ ಬಿ.ಎಂ, ಗ್ರಂಥಾಲಯ ಸಂಚಾಲಕಿ ಸಂದ್ಯಾ ರಾಣಿ ಟೀಚರ್ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಿದರು. ಹೈಯರ್ ಸೆಕೆಂಡರಿ ಪ್ರಾಧ್ಯಾಪಕ ಶಿಜಿನ್ ವಿದ್ಯಾರ್ಥಿಗಳಿಗೆ ಪುಸ್ತಕ ವಾರಚಾರಣೆಯ ಮಹತ್ವ ತಿಳಿಸಿದರು. ಎಲ್ಲ ಮಕ್ಕಳಿಂದ ಅನಿಸಿಕೆಯ ಭಾಷಣ ಮಾಡಿಸಲಾಯಿತು. ವಿದ್ಯಾರ್ಥಿಗಳಿಗೆ ಕನ್ನಡ ಭವನ ಪ್ರಕಾಶನದ ಸಮಾಜ ಸಂಪದ ಪುಸ್ತಕ ನೀಡಲಾಯಿತು. ಚೈತಾಲಿ ಅಣಂಗೂರ್ ಸ್ವಾಗತಿಸಿದರು. ಸಂಧ್ಯಾರಾಣಿ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಮನೀಶ್ ರಾಜ್ ವಂದಿಸಿದರು.