ಕೊಚ್ಚಿ: ಕುವೈತ್ ನ ಅಗ್ನಿ ಅವಘಡದಲ್ಲಿ ಮೃತಪಟ್ಟವರಿಗೆ ಕೇರಳ ಅಂತಿಮ ನಮನ ಸಲ್ಲಿಸಿದೆ. ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಮೃತದೇಹಗಳನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಿದಾಗ ಮುಖ್ಯಮಂತ್ರಿ, ಇತರೆ ಸಚಿವರು ಹಾಗೂ ವಿರೋಧ ಪಕ್ಷದ ನಾಯಕರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.
ಎಲ್ಲಾ 23 ಮಲಯಾಳಿಗಳ ಮೃತ ದೇಹಗಳನ್ನು ವಿಮಾನ ನಿಲ್ದಾಣಕ್ಕೆ ಇಂದು ತರಲಾಗಿದ್ದು, ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.
ಅಂತಿಮ ನಮನ ಸಲ್ಲಿಸಲು ಕೇಂದ್ರ ಸಚಿವರಾದ ಕೀರ್ತಿ ವರ್ಧನ್ ಸಿಂಗ್ ಮತ್ತು ಸುರೇಶ್ ಗೋಪಿ ಉಪಸ್ಥಿತರಿದ್ದರು. ಮೃತರ ಅನೇಕ ಸಂಬಂಧಿಕರು ವಿಮಾನ ನಿಲ್ದಾಣವನ್ನು ತಲುಪಿದ್ದರು. ಕೊಚ್ಚಿಯಲ್ಲಿ ಅಳುತ್ತಿದ್ದವರಿಗೆ ಸಾಂತ್ವನ ಹೇಳಲು ನೆರೆದಿದ್ದವರು ಪರದಾಡುತ್ತಿದ್ದ ದೃಶ್ಯ ಕಂಡು ಬಂತು.
ಇಲ್ಲಿಂದ ಪ್ರತ್ಯೇಕ ಆಂಬ್ಯುಲೆನ್ಸ್‍ಗಳಲ್ಲಿ ಪ್ರತಿ ಪಾರ್ಥಿವ ಶರೀರವನ್ನು ಅವರವರ ಕುಟುಂಬಗಳಿಗೆ ಹಸ್ತಾಂತರಿಸಿ ಕಳಿಸಲಾಯಿತು. ಪ್ರತಿ ಆಂಬ್ಯುಲೆನ್ಸ್‍ಗೆ ಪೋಲೀಸ್ ಪೈಲಟ್ ವಾಹನ ಬೆಂಗಾವಲಾಗಿ ವ್ಯವಸ್ಥೆಗೊಳಿಸಲಾಗಿತ್ತು.
ಕೊಚ್ಚಿಯಲ್ಲಿ ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಸ್ಥಳೀಯರ ಶವಗಳನ್ನು ಅಧಿಕಾರಿಗಳು ಹಸ್ತಾಂತರಿಸಿದ ನಂತರ, ವಾಯುಪಡೆಯ ವಿಮಾನ ದೆಹಲಿಗೆ ಮರಳಿತು. ವಿಮಾನದಲ್ಲಿ ಮಹಾರಾಷ್ಟ್ರ, ಕೇರಳ ಸೇರಿದಂತೆ 14 ಜನರ ಮೃತದೇಹಗಳಿದ್ದವು.